

ಚಿಂತಾಮಣಿ : ತಾಲೂಕಿನ ಚಿನ್ನಸಂದ್ರ ಹೊರವಲಯದಲ್ಲಿ ಅಕ್ರಮವಾಗಿ ಮತ್ತೆ ತಲೆ ಎತ್ತಿರುವ 20ಕ್ಕೂ ಹೆಚ್ಚು ಕ್ಯಾಟ್‌ಫಿಶ್ ಹೊಂಡಗಳನ್ನು ಶುಕ್ರವಾರ ಬೆಳಗ್ಗೆ ತಾಲೂಕು ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದರು.
ಕಳೆದ ಅಕ್ಟೋಬರ್ ತಿಂಗಳಿನಿಂದ ಹೊಂಡಗಳ ತೆರವಿಗೆ ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳು ಶುಕ್ರವಾರ ಖಾಕಿ ಬಂದೋಬಸ್ತ್‌ನಲ್ಲಿ 20ಕ್ಕೂ ಹೆಚ್ಚು ಕ್ಯಾಟ್‌ಫಿಶ್ ಹೊಂಡಗಳನ್ನು ತೆರವುಗೊಳಿಸಿದರು.ಮುಂಗಾನಹಳ್ಳಿಗೆ ಭಾನುವಾರ ಭೇಟಿ ನೀಡಿದ್ದ ಸಂಸದ ಎಸ್.ಮುನಿಸ್ವಾಮಿ ನೀವಾಗಿ ಕ್ಯಾಟ್‌ಫಿಶ್ ಹೊಂಡಗಳನ್ನು ತೆರವು ಮಾಡ್ತಿರೋ ಇಲ್ಲವೆ ನಾನೇ ಬರಬೇಕಾ ಎಂದು ತಹಸೀಲ್ದಾರ್ ವಿಶ್ವನಾಥ್ ಸೇರಿ ಪೊಲೀಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
150 ಪೊಲೀಸರು, 20 ಎಸ್‌ಎಸ್‌ಐ, ಒಂದು ಡಿಎಆರ್, ಮಹಿಳಾ ಪೊಲೀಸ್, 20 ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರಬಾಬು, ಆಹಾರ ಇಲಾಖೆ ನಿರೀಕ್ಷಕ ಪ್ರಕಾಶ್, ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್, ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸಪ್ಪ, ನಗರಠಾಣೆ ಇನ್‌ಸ್ಪೆಕ್ಟರ್ ಆನಂದ್, ಪಿಸ್‌ಐ ನರೇಶ್ ನಾಯಕ್, ಅರ್‌ಐ ಆಂಬರೀಷ್, ಕಾರ್ಯದರ್ಶಿ ಚಂದ್ರಶೇಖರ್, ಚಿನ್ನಸಂದ್ರ ಗ್ರಾಮ ಸಹಾಯಕಿ ನಾಗವೇಣಿ
ಇದ್ದರು.
ಇಂಡಿಯನ್ ಕ್ಯಾಟ್‌ಫಿಶ್ ಎಂದಿದ್ದ ಸಾಕಣೆದಾರರು : ಆಫ್ರಿಕನ್ ಕ್ಯಾಟ್‌ಫಿಶ್ ಸಾಕಣೆ ಮಾಡುತ್ತಿಲ್ಲ, ಅವೆಲ್ಲ ಇಂಡಿಯನ್ ಕ್ಯಾಟ್‌ಫಿಶ್ ಎಂದು 2019ರ ಅಕ್ಟೋಬರ್‌ನಲ್ಲಿ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೀನು ಸಾಕಣೆದಾರರು ಸಮರ್ಥಿಸಿಕೊಂಡಿದ್ದರು, ಅಷ್ಟೇ ಅಲ್ಲದೆ ಆಫ್ರಿಕನ್ ಕ್ಯಾಟ್‌ಫಿಶ್ ಎಂದು ದೃಢಪಡಿಸಿದರೆ ನಾವೇ ತೆರವುಗೊಳಿಸುವುದಾಗಿ ಸವಾಲು ಹಾಕಿದ್ದರು.
ಆಫ್ರಿಕನ್ ಕ್ಯಾಟ್‌ಫಿಶ್‌ಗಳೆಂದು ವರದಿ : ಚಿಕ್ಕಬಳ್ಳಾಪುರ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಯಶಸ್ವಿನಿ ಮತ್ತು ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ನಾಗೇಂದ್ರ ಬಾಬು ನೇತೃತ್ವದಲ್ಲಿ ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ, ಬೆಂಗಳೂರಿನ ಹೆಬ್ಬಾಳ ಮತ್ತು ಹೆಸರುಘಟ್ಟದ ಮೀನುಗಾರಿಕೆ ಮತ್ತು ಮಾಹಿತಿ ಕೇಂದ್ರದ ವಿಜ್ಞಾನಿಗಳು ತಂಡ ಅಕ್ಟೋಬರ್ 22ರಂದು ಚಿನ್ನಸಂದ್ರದ ಮೀನುಸಾಕಣೆ ಹೊಂಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಚಿನ್ನಸಂದ್ರದಲ್ಲಿ ಸಾಕುತ್ತಿರುವುದು ಆಫ್ರಿಕನ್ ಕ್ಯಾಟ್‌ಫಿಶ್‌ಗಳು ಎಂದು ವಿಜ್ಞಾನಿಗಳ ತಂಡ ದೃಢಪಡಿಸಿ ವರದಿ ನೀಡಿದ್ದರು. ಆದರೆ ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್ 5 ತಿಂಗಳಿನಿಂದ ಮೀನಮೇಷ ಎಣಿಸುತ್ತಿದ್ದರು.