ಚಿನ್ನದೊಂದಿಗೆ ‘ಯುಪಿಎಸ್‌ಸಿ’ ಜರ್ನಿ ಕನಸು

10Manju2
ವಿಟಿಯು ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಬುಶ್ರಾ ಮತೀನ್, ರಮ್ಯಾ ಟಿ., ಪ್ರಜ್ಞಾ ಎನ್., ವಿವೇಕ ಭದ್ರಕಾಳಿ, ಚಂದನಾ ಎಂ. ಸಂಭ್ರಮಿಸಿದರು.
Published on

ಬೆಳಗಾವಿ: ನಾವು ಇಂಜಿನಿಯರಿಂಗ್ ಮುಗಿಸಿರುವ ಮಾತ್ರಕ್ಕೆ ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡಬೇಕು ಎಂಬ ನಿಯಮವಿಲ್ಲ. ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್, ಐಪಿಎಸ್, ಐಆರ್‌ಎಸ್ ಅಧಿಕಾರಿಗಳಾಗಿ ಜನಸೇವೆ ಮಾಡಬೇಕು ಎಂಬ ಕನಸಿದೆ. ಉನ್ನತ ಶಿಕ್ಷಣಕ್ಕೆ ಹೋಗುವ ಬದಲಾಗಿ ‘ಯುಪಿಎಸ್‌ಸಿ’ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ.

ಇದು, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು)21ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ಸಾಧಕ ವಿದ್ಯಾರ್ಥಿಗಳು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡ ಮನದಾಳ.

ಕೋವಿಡ್-19, ಲಾಕ್‌ಡೌನ್‌ನಂತಹ ಕಠಿಣ ಸಂದರ್ಭದಲ್ಲಿ ದಿನಕ್ಕೆ 4ರಿಂದ 6 ಗಂಟೆ ಅಧ್ಯಯನ ಮಾಡಿ ಪದವಿ ಮುಗಿಸಿದ್ದೇವೆ. ಎಂ.ಟೆಕ್. ಸೇರಿದಂತೆ ಉನ್ನತ ಶಿಕ್ಷಣಕ್ಕೆ ಹೋಗುವ ಆಸಕ್ತಿ ಇಲ್ಲ. ಬದಲಾಗಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮುಂದುವರಿಸುತ್ತೇವೆ. ಅದು ಸಾಧ್ಯವಾಗದಿದ್ದರೆ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಭವಿಷ್ಯದ ದಾರಿ ತೆರೆದಿಟ್ಟರು.

ವಿಟಿಯು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 16 ಚಿನ್ನದ ಪದಕ ಗಳಿಸಿರುವ ರಾಯಚೂರಿನ ಎಸ್‌ಎಲ್‌ಎನ್ ಇಂಜಿನಿಯರಿಂಗ್ ಕಾಲೇಜ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಬುಶ್ರಾ ಮತೀನ್, 7 ಚಿನ್ನದ ಪದಕ ಪಡೆದ ಬೆಳಗಾವಿ ಕೆಎಲ್ಇ ಸಂಸ್ಥೆಯ ಶೇಷಗಿರಿ ಕಾಲೇಜ್‌ನ ವಿವೇಕ ಭದ್ರಕಾಳಿ, ಬಳ್ಳಾರಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಕಾಲೇಜ್‌ನ ವಿದ್ಯಾರ್ಥಿನಿ ಚಂದನಾ ಎಂ., ಬೆಂಗಳೂರಿನ ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್‌ನ ಇ ಆ್ಯಂಡ್ ಸಿ ವಿಭಾಗದ ವಿದ್ಯಾರ್ಥಿ ಸ್ವಾತಿ ದಯಾನಂದ ಯುಪಿಎಸ್‌ಸಿ ಕನಸು ನನಸು ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಆರು ಚಿನ್ನದ ಪದಕ ಪಡೆದಿರುವ ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ರಮ್ಯಾ ಟಿ., ಉನ್ನತ ಶಿಕ್ಷಣದ ಬದಲಾಗಿ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಕನಸು ಹೊಂದಿದ್ದಾಳೆ. ಅದಕ್ಕೆ ಬೇಕಾದ ಪೂರಕ ಸಿದ್ಧತೆ ಆರಂಭಿಸಿದ್ದು, ಪಾಲಕರಿಂದ ನನಗೆ ಅಗತ್ಯ ಪ್ರೋತ್ಸಾಹ ಸಿಗುತ್ತಿದೆ ಎಂದು ತಮ್ಮ ಮುಂದಿನ ನಡೆಯ ಕುರಿತು ಮಾಹಿತಿ ಹಂಚಿಕೊಂಡಳು.

ಮೊದಲು ಉದ್ಯೋಗ ನಂತರ ಪರೀಕ್ಷೆ: ನಾಲ್ಕು ಚಿನ್ನದ ಪದಕ ಪಡೆದಿರುವ ಬೆಂಗಳೂರಿನ ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಪ್ರಜ್ಞಾ ಎನ್.ಬೆಂಗಳೂರಿನ ಬಾಷ್ ಕಂಪನಿಯಲ್ಲಿ ಹಾಗೂ ನಾಲ್ಕು ಚಿನ್ನದ ಪದಕ ಪಡೆದಿರುವ ಶಿವಮೊಗ್ಗದ ಜೆಎನ್‌ಎನ್‌ಸಿಇ ಕಾಲೇಜ್ ವಿದ್ಯಾರ್ಥಿನಿ ಪಲ್ಲವಿ ಪಿ., ಟಿಸಿಎಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಎರಡು ವರ್ಷ ಉದ್ಯೋಗ ಮಾಡಿದ ಬಳಿಕ ಎಂ.ಟೆಕ್ ಪದವಿ ಗಳಿಸಿ, ಯುಪಿಎಸ್‌ಸಿ ಆರಂಭಿಸಬೇಕು ಎನ್ನುವ ಗುರಿ ಹೊಂದಿದ್ದಾರೆ. ನಾಲ್ಕು ಚಿನ್ನದ ಪದಕ ಪಡೆದಿರುವ ಬೆಂಗಳೂರಿನ ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ತೇಜಸ್ವಿನಿ ಆರ್., ತಲಾ 3 ಚಿನ್ನದ ಪದಕ ಪಡೆದುಕೊಂಡಿರುವ ಅಶ್ವಿತಾ ಎನ್., ದಾವಣಗೆರೆ ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿನಿ ಸವಿತಾ ಎಚ್.ಟಿ. ಉನ್ನತ ಶಿಕ್ಷಣ ಪಡೆಯುವ ಆಸೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net