ಚಿನ್ನದ ಹೆಸರಲ್ಲಿ ವಂಚಿಸಿದ್ದವರ ಬಂಧನ

H2 Chinna Sulige
Published on

ಹುಬ್ಬಳ್ಳಿ: ನಮ್ಮ ಅಜ್ಜನಿಗೆ ಬಂಗಾರ ಸಿಕ್ಕಿದೆ. ಕಡಿಮೆ ಬೆಲೆಗೆ ಅರ್ಧ ಕೆ.ಜಿ. ಬಂಗಾರ ಕೊಡುತ್ತೇವೆ ಎಂದು ನಂಬಿಸಿ ಹಲ್ಲೆ ಮಾಡಿ 5,54,000 ರೂ. ಕಿತ್ತುಕೊಂಡು ಪರಾರಿಯಾಗಿದ್ದ ಆರು ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಪ್ರಶಾಂತ ಕೊರಚರ, ಪ್ರವೀಣ ಕೊರಚರ, ಅನೀಲ ಕೊರಚರ, ಪರಮೇಶ ಕೊರಚರ, ಮಾರುತಿ ಕೆ.ಎಸ್., ಅರುಣ ಕೊರಚರ ಬಂಧಿತರು. ಅವರಿಂದ ಕಾರು, ಬೈಕ್ ಹಾಗೂ ಚಿನ್ನ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಚನ್ನಪಟ್ಟಣ ಮೂಲದ ಸುರೇಶ ವೆಂಕಟಪ್ಪ ಎಂಬುವರನ್ನು ಪರಿಚಯ ಮಾಡಿಕೊಂಡು, ನಮ್ಮ ಅಜ್ಜನಿಗೆ ಬಂಗಾರ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಸಣ್ಣ ಚಿನ್ನದ ತುಣುಕು ನೀಡಿ ನಂಬಿಸಿದ್ದರು. 5,50,000 ರೂ. ಗೆ ಅರ್ಧ ಕೆ.ಜಿ. ಚಿನ್ನ ಕೊಡುವುದಾಗಿ ಮಾತುಕತೆ ನಡೆಸಿದ್ದರು.

ಸುರೇಶ ತನ್ನ ಗೆಳೆಯ ವಿಜಯಭಾಸ್ಕರನೊಂದಿಗೆ 5.50 ಲಕ್ಷ ರೂ. ಹಣದ ಬ್ಯಾಗ್ ಜತೆ ಚಿನ್ನ ಖರೀದಿಗೆ ಬಂದಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಟ್ಟಿಗೆಯಿಂದ ಹಲ್ಲೆ ಮಾಡಿ ಹಣದ ಬ್ಯಾಗ್, ಜೇಬಿನಲ್ಲಿದ್ದ 4,000 ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗ್ರಾಮೀಣ ಠಾಣೆ ಇನ್ಸ್​ಪೆಕ್ಟರ್ ರಮೇಶ ಗೋಕಾಕ ಹಾಗೂ ಪಿಎಸ್​ಐ ಮಂಜುಳಾ ಸದಾರಿಯವರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ವರೂರು ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಿದೆ. ಕದ್ದ ಹಣದಿಂದ ಖರೀದಿಸಿದ್ದ ಕಾರು, ಬೈಕ್ ಹಾಗೂ ಚಿನ್ನ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net