

ಆನೇಕಲ್: ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಒಡೆವೆ ನೀಡುವುದಾಗಿ ಕಟ್ಟಿಸಿಕೊಂಡಿದ್ದ ಚಿನ್ನದ ಚೀಟಿ ಹಣವನ್ನು ನೀಡದೆ ಜುವೆಲ್ಲರಿ ಮಾಲೀಕ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡವರು ಈಗ ಸೂರ್ಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
10 ವರ್ಷಗಳಿಂದ ಆನಂದ್ ಜುವೆಲ್ಲರ್ಸ್ ಆ್ಯಂಡ್, ಕೇಸರ್ ಬ್ಯಾಂಕರ್ಸ್ ಮಾಲೀಕ ಮುನಾರಾಂ ಹಾಗೂ ಆತನ ಸಹೋದರರು ಚಿನ್ನದ ಅಂಗಡಿ ನಡೆಸಿಕೊಂಡು ಬಂದಿದ್ದರು. ಗ್ರಾಮಸ್ಥರ ನಂಬಿಕೆ ಗಳಿಸಿದ್ದರು. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಒಡವೆ ಕೊಡುವುದಾಗಿ ನಂಬಿಸಿದ್ದ ಮುನಾರಾಂ, ಒಂದು ವರ್ಷದಿಂದ ತಿಂಗಳಿಗೆ ಇಷ್ಟು ಹಣ ಎಂದು ಕಟ್ಟಿಸಿಕೊಂಡಿದ್ದ, ನೂರಾರು ಜನರು ಹಣ ಕಟ್ಟಿದ್ದರು. ಜತೆಗೆ ಹಲವರು ಆಭರಣವನ್ನು ಅಡಮಾನ ಇಟ್ಟಿದ್ದರು. ಆದರೆ ಮಾಲೀಕ ಅಂಗಡಿ ಬಂದ್ ಮಾಡಿಕೊಂಡು ಚಿನ್ನಾಭರಣ ಸಮೇತ ಪರಾರಿಯಾಗಿದ್ದಾನೆ.
ಕಾಚನಾಯಕನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿ, ಕಿತ್ತಗಾನಹಳ್ಳಿಯಲ್ಲೂ ಅಂಗಡಿ ತೆರೆದು ವ್ಯಾಪಾರ ಮಾಡಿಕೊಂಡಿದ್ದ. ಆದರೆ ಅಂಗಡಿ ಹಾಗೂ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದು, ಚೀಟಿ, ಕಾರು, ಚಿನ್ನ ಅಡಮಾನದ ಹೆಸರಿನಲ್ಲಿ ಅಂದಾಜು 5-6 ಕೋಟಿ ರೂ. ಲಪಟಾಯಿಸಿದ್ದಾನೆ ಎನ್ನಲಾಗಿದೆ. ಹಾಗೆಯೇ, ಈತ ಕೆಲವರಿಗೆ ನಕಲಿ ಚಿನ್ನ ನೀಡಿದ್ದ ಎಂಬ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದವರು ಪೊಲೀಸ್ ಠಾಣೆಯ ಮೊರೆ ಹೋಗಿದ್ದು, ಆರೋಪಿ ಬಂಧನಕ್ಕೆ ಆಗ್ರಹಿಸಿದ್ದಾರೆ. ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಕಳ್ಳನ ಸೆರೆಗೆ ಬಲೆ ಬಿಸಿದ್ದಾರೆ.
ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಚಿನ್ನದ ಅಂಗಡಿ ಇದ್ದ ಹಿನ್ನೆಲೆ ನಾವೆಲ್ಲರೂ ಅಲ್ಲಿಯೇ ಚಿನ್ನ ಇಟ್ಟು ಹಣ ಪಡೆದುಕೊಂದ್ದೇವೆ. ಈಗ ಏಕಾಏಕಿ ಮನೆ ಹಾಗೂ ಅಂಗಡಿ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದ್ದ ಹಣ ಹಾಗೂ ಚಿನ್ನ ಎಲ್ಲವನ್ನೂ ಕಳೆದುಕೊಂಡಿದ್ದೇವೆ.ಮುದ್ದಮ್ಮ, ಕಾಚನಾಯಕನಹಳ್ಳಿಲಕ್ಷಾಂತರ ಮೌಲ್ಯದ ಚಿನ್ನದ ಸರ ಹಾಗೂ ಉಂಗುರ ಅಡಮಾನ ಇಟ್ಟು, ಎರಡು ಲಕ್ಷ ರೂ. ಮಾತ್ರ ಸಾಲ ಪಡೆದಿದ್ದೆ. ಅಂಗಡಿ ಮಾಲೀಕ ಚಿನ್ನದ ಸಮೇತ ಪರಾರಿ ಆಗಿದ್ದು, ಪೊಲೀಸರು ನ್ಯಾಯ ಕೊಡಿಸಬೇಕು.ರಾಜು, ಒಡೆವೆ ಅಡಮಾನ ಇಟ್ಟವರು