ಚಿನ್ನ ಖರೀದಿ ನೆಪದಲ್ಲಿ ವಂಚನೆ

Published on

ಕುಶಾಲನಗರ: ಚಿನ್ನ ಖರೀದಿ ನೆಪದಲ್ಲಿ ಅಂಗಡಿಗೆ ತೆರಳಿ, ಮಾಲೀಕರ ಗಮನ ಬೇರೆಡೆ ಸೆಳೆದು, ನಕಲಿ ಆಭರಣ ಇಟ್ಟು ಅಸಲಿ ಆಭರಣ ಲಪಟಾಯಿಸಿದ್ದ ಇಬ್ಬರು ಐನಾತಿ ವಂಚಕಿಯರನ್ನು ಇತ್ತೀಚೆಗೆ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಭರಮಸಾಗರ ಪಾಮರಹಳ್ಳಿ ಗ್ರಾಮದ ನಿವಾಸಿಗಳಾದ ಕೈರುನ್(46), ಜೈರಾಭಿ(36) ಬಂಧಿತರು. ಇವರಿಂದ 22.34 ಗ್ರಾಂನಷ್ಟು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಕುಶಾಲನಗರದ ರಥ ಬೀದಿಯಲ್ಲಿರುವ ಶೀತಲ್ ಜ್ಯುವೆಲ್ಲರಿಗೆ ಜೂ. 5ರಂದು ಇಬ್ಬರು ಬುರ್ಖಾಧಾರಿ ಮಹಿಳೆಯರು ಮತ್ತು ಒಬ್ಬ ಯುವಕ ಚಿನ್ನಾಭರಣ ಖರೀದಿ ನೆಪದಲ್ಲಿ ಆಗಮಿಸಿದ್ದಾರೆ. ಮಾಲೀಕರ ಗಮನ ಬೇರೆಡೆ ಸೆಳೆದು ಅಂದಾಜು 22.34 ಗ್ರಾಂ ತೂಕದ ಚಿನ್ನಾಭರಣ ಎಗರಿಸಿ, ಬದಲಿಗೆ ನಕಲಿ ಆಭರಣ ಇಟ್ಟು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.

ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು ಹಾಗೂ ಬೆಂಗಳೂರಿನ ಹಲವೆಡೆ ನೂರಾರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಬುರ್ಖಾಧಾರಿಗಳ ಗುರುತು ಪತ್ತೆಹಚ್ಚಲು ಶ್ರಮಿಸಿದ್ದೇವೆ ಎಂದು ಪಿಎಸೈ ರವೀಂದ್ರ ತಿಳಿಸಿದ್ದಾರೆ.

ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾರ್ಗದರ್ಶನ ಹಾಗೂ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ನೇತೃತ್ವದಲ್ಲಿ ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಜು.5 ರಂದು ಆರೋಪಿಗಳನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಎಸ್‌ಪಿ ಕೆ. ರಾಮರಾಜನ್ ತಂಡವನ್ನು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net