ಚಿನಕುರುಳಿಯಲ್ಲಿ ಲವ್ ಜಿಹಾದ್ ಷಡ್ಯಂತ್ರ ಆರೋಪ

17-pnp 1
Published on

ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿರುವ ಪ್ರೇಮ ಪ್ರಕರಣದಲ್ಲಿ ಲವ್ ಜಿಹಾದ್ ಷಡ್ಯಂತ್ರ ನಡೆದಿದ್ದು, ಈ ಪ್ರೇಮ ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ಹಿಂದು ಪರ ಸಂಘಟನೆಗಳು ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್ ಅವರನ್ನು ಒತ್ತಾಯಿಸಿವೆ.

ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಬಿಜಿಪಿ ಕಾರ್ಯಕರ್ತರು ಗುರುವಾರ ಪೊಲೀಸ್ ಠಾಣೆಗೆ ತೆರಳಿ ಇದು ಲವ್ ಜಿಹಾದ್ ಪ್ರಕರಣವಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಚಿನಕುರಳಿ ಗ್ರಾಮದ ಗೌಸ್ ಪಾಷ ಎಂಬುವವರ ಮಗ ಮುಜಾಸಿನ್ ಪಾಷ ಅದೇ ಗ್ರಾಮದ ಶಿವಣ್ಣ ಎಂಬುವವರ ಮಗಳು ಎಸ್.ಸಹನಾ ಅವರನ್ನು ನಂಬಿಸಿ ಪ್ರೀತಿ ಬಲೆಗೆ ಸಿಲುಕಿಸಿದ್ದಾನೆ. ಈ ಪ್ರಕರಣ ಕೇವಲ ಪ್ರೇಮ ಪ್ರಕರಣವಾಗಿ ಉಳಿದಿಲ್ಲ. ಇಡೀ ಪ್ರಕರಣದ ಹಿಂದೆ ಲವ್ ಜಿಹಾದ್ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ. ಹಿಂದು ಯುವತಿಯರನ್ನು ಲವ್ ಜಿಹಾದ್‌ಗೆ ಕೆಡವಲು ದೊಡ್ಡ ಹುನ್ನಾರವೇ ನಡೆದಿರುವಂತೆ ಕಾಣುತ್ತಿದೆ. ಚಿನಕುರಳಿ ಗ್ರಾಮದಲ್ಲಿ ಈ ಹಿಂದೆ ನಾಯಿ ಮಾಂಸ ಮಾರಾಟ ಹಾಗೂ ಕೋಮು ಗಲಭೆ ಸೃಷ್ಟಿಗೆ ಅಗತ್ಯವಾದ ಬೆಳವಣಿಗೆಗಳು ನಡೆದಿವೆ. ಇದೊಂದು ಸಾಮಾನ್ಯ ಪ್ರೇಮ ಪ್ರಕರವಣವಾಗಿದ್ದರೆ ನಾವ್ಯಾರು ಪ್ರಶ್ನೆ ಮಾಡುತ್ತಿರಲಿಲ್ಲ. ಇದು ಅತ್ಯಂತ ಗಂಭೀರ ಪ್ರಕರವಾಗಿದೆ ಎಂಬ ಮಾಹಿತಿ ನಮಗೂ ಲಭ್ಯವಾಗಿದೆ. ಇಡೀ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ದೊಡ್ಡ ಮಟ್ಟದ ತನಿಖೆ ನಡೆಸಬೇಕು ಎಂದು ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದರು.

ಲವ್ ಜಿಹಾದ್‌ಒಳಗಾಗಿರುವ ಯುವತಿಯ ಸ್ನೇಹಿತೆಯರು ಕೂಡ ಈ ಜಾಲಕ್ಕೆ ಸಿಲುಕಿರುವ ಬಗ್ಗೆ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಮುಸ್ಲಿಂಮರು ಪ್ರಾಬಲ್ಯ ಹೊಂದಿರುವ ಚಿನಕುರಳಿ ಗ್ರಾಮವನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಪೊಲೀಸರು ಗಮನಹರಿಸಬೇಕು. ನಮಗೆ ನ್ಯಾಯ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಹೋರಾಟ ಮತ್ತು ಪ್ರತಿಭಟನೆಯ ಹಾದಿ ಹಿಡಿಯುತ್ತಿಲ್ಲ. ಈ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಅಥವಾ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆದರೆ ನಾವು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಪಶ್ಚಿಮ ಬಂಗಾಳ ಸೇರಿದಂತೆ ಹಲವು ನಗರಗಳಲ್ಲಿ ತಿಂಗಳುಗಟ್ಟಲೇ ಉಳಿದುಕೊಂಡು ಲವ್ ಜಿಹಾದ್ ತರಬೇತಿ ಪಡೆದುಕೊಂಡಿದ್ದಾನೆ. ಆತ ಪಶ್ಚಿಮಬಂಗಾಳದಲ್ಲಿ ತಿಂಗಳುಗಟ್ಟಲೇ ಯಾವ ಕಾರಣಕ್ಕೆ ನೆಲೆಸಿದ್ದ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಪೊಲೀಸ್ ಇಲಾಖೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆ ಇದೆ. ಹೀಗಾಗಿ ನಾವು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿಲ್ಲ. ಪಲೀಸರು ಪ್ರಕರಣದ ಆಳವನ್ನು ಅರಿತು ಕಾನೂನು ರೀತಿಯಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ವ್ಯತ್ಯಾಸವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್ ಮಾತನಾಡಿ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪತ್ತೆಗೆ ಕ್ರಮ ಕೈಗೊಂಡು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ಯುವತಿಯನ್ನು ಮಂಡ್ಯದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ನೀವು ಹೇಳಿರುವ ಎಲ್ಲ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಹಿಂದು ಪರ ಸಂಘಟನೆ ಮುಖಂಡರಾದ ಹಿರೇಮರಳಿ ಶ್ರೀನಿವಾಸ್, ಕೆನ್ನಾಳು ಕಮಲೇಶ್, ಡಾಮಡಹಳ್ಳಿ ಕೇಶವ, ಪಾಂಡಿದೊರೆ, ದೊರೆಸ್ವಾಮಿ, ಎಂ.ರಾಜು, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಎಣ್ಣೆಹೊಳೆಕೊಪ್ಪಲು ನಿರಂಜನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net