

ಕುಮಟಾ: ಪಟ್ಟಣದ ಚಿತ್ರಿಗಿಯ ಕಲ್ಗುಡ್ಡದಲ್ಲಿ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಮರಾಕಲ್ ನೀರು ಪೂರೈಕೆ ವ್ಯವಸ್ಥೆ ಇದ್ದರೂ ಚಿತ್ರಿಗಿ ಭಾಗಕ್ಕೆ ನೀರಿನ ಹರಿವು ನಿಧಾನವಾಗಿತ್ತು. ಇದರಿಂದ ಸಾರ್ವಜನಿಕರ ಕೋರಿಕೆಯಂತೆ ಪ್ರಸ್ತಾವನೆ ಸಿದ್ಧಪಡಿಸಿ 114.80 ಲಕ್ಷ ರೂ. ವೆಚ್ಚದ 2.50 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಮಂಜೂರಿ ಪಡೆಯಲಾಗಿದೆ. ಮರಾಕಲ್ ನೀರನ್ನು ನೆಲ ಮಟ್ಟದಲ್ಲಿ ಸಂಗ್ರಹಿಸಿ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಎತ್ತರಿಸಿ ವಿತರಿಸುವುದರಿಂದ ಸುತ್ತಮುತ್ತಲಿನ ನಾಲ್ಕೈದು ವಾರ್ಡ್ಗಳಿಗೆ ಉತ್ತಮವಾಗಿ ನೀರು ಪೂರೈಕೆಯಾಗಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ ಪೈ, ಸದಸ್ಯರಾದ ಅನಿಲ್ ಹರ್ಮಲಕರ್, ಸುಮತಿ ಎನ್. ಭಟ್, ಸಂತೋಷ ನಾಯ್ಕ, ತುಳಸು ಗೌಡ, ಜಿಪಂ ಸದಸ್ಯ ಗಜಾನನ ಪೈ, ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಒಳಚರಂಡಿ ಮಂಡಳಿಯ ಅಧಿಕಾರಿ ಬಾಂದೇಕರ್, ಪುರಸಭೆ ಇಂಜಿನಿಯರ್ ಹೇಮಚಂದ್ರ ಇದ್ದರು.