

ಬಾಗೇಪಲ್ಲಿ : ಕುಡಿಯುವ ನೀರು, ಈಜು-ಮೋಜಿನ ಅನುಭವ, ಪೂಜನೀಯ ಸ್ಥಾನಮಾನಕ್ಕೆ ಪಾತ್ರವಾಗಿರುವ ಚಿತ್ರಾವತಿ ನದಿ ಒಡಲನ್ನು ಚರಂಡಿ ಕೊಳಚೆ, ಕಸಕಡ್ಡಿ, ಆವರಿಸುತ್ತಿದೆ. ಇದರಿಂದಾಗಿ ಜೀವಜಲದ ಸ್ವರೂಪವೇ ಬದಲಾಗುತ್ತಿದೆ.
ಮಳೆಗಾಲದಲ್ಲಿ ಮೈದುಂಬುವ ಜಿಲ್ಲೆಯ ಪ್ರಮುಖ ನದಿಯಾಗಿದ್ದು, ಈ ಭಾಗದಲ್ಲಿ ಹುಟ್ಟಿ, ಆಂಧ್ರ ಪ್ರದೇಶದ ಅನಂತಪುರ, ಕಡಪ ಮೂಲಕ ಹರಿದು ಪೆನ್ನಾರ್, ನದಿಯಲ್ಲಿ ಲೀನವಾಗುತ್ತದೆ, 5908 ಕಿ.ಮೀ ವಿಸ್ತೀರ್ಣದ ಜಲಾನಯನ ಪ್ರದೇಶ ಹೊಂದಿರುವ ಚಿತ್ರಾವತಿ ಬಾಗೇಪಲ್ಲಿಯ ದಾಹ ನೀಗಿಸುವ ಮೂಲವಾಗಿದೆ. ಚಿತ್ರಾವತಿ ಮತ್ತು ಪರಗೋಡು ಜಲಾಶಯ ಸೇರಿ ಸುತ್ತಲ ಪ್ರದೇಶದಲ್ಲಿ ಸಂಗ್ರಹವಾಗುವ ನೀರಿನಿಂದ ಈ ಭಾಗದಲ್ಲಿ ಅಂತರ್ಜಲಮಟ್ಟ ಸುಧಾರಣೆ ಕಾರಣವೂ ಆಗಿದೆ.
ಆದರೆ ಚಿತ್ರಾವತಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು ನದಿಪಾತ್ರ ಒತ್ತುವರಿಯಾಗಿದೆ. ಗಿಡ-ಗಂಟಿಗಳು ಬೆಳೆದು ಸ್ವರೂಪವೇ ಬದಲಾಗುತ್ತಿದೆ. ಪಟ್ಟಣದ ವಿವಿಧೆಡೆಯಿಂದ ಕಸಕಡ್ಡಿ, ಕಟ್ಟಣದ ತ್ಯಾಜ್ಯಗಳಾದ ಕಲ್ಲು ಮಣ್ಣು, ಪ್ಲಾಸ್ಟಿಕ್‌ನ್ನು ರಾಜಾರೋಷವಾಗಿಯೇ ನದಿಗೆ ಸುರಿಯಲಾಗುತ್ತಿದ್ದು ಇದರೊಂದಿಗೆ ಅಲ್ಲಲ್ಲಿ ಚರಂಡಿ ನೀರು ಸೇರಿ ದುರ್ನಾತ ಬೀರುತ್ತಿದೆ.
ಸ್ವಚ್ಛತಾ ಅಭಿಯಾನ ಅರ್ಧಂಬರ್ಧ : ಕಳೆದ ವರ್ಷ ಫೆಬ್ರವರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಚಿತ್ರಾವತಿ ನದಿಯ ಸ್ವಚ್ಛತಾ ಅಭಿಯಾನ ಕೈಗೊಂಡು ತ್ಯಾಜ್ಯ ತೆಗೆದಿದ್ದರು. ಆದರೆ, ಇದೂ ಸಹ ಅರ್ಧಂಬರ್ಧ ಆಗಿದೆ. ಮತ್ತೆ ನದಿ ಸ್ವರೂಪ ಬದಲಾಗುತ್ತಿರುವುದರ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ನದಿ ಯಥಾಸ್ಥಿತಿಗೆ ಬಂದಿದೆ. ಮೊನ್ನೆ ಬಿದ್ದ ಮಳೆಯಿಂದ ಪಟ್ಟಣದ ಎಡ ಮತ್ತು ಬಲ ಭಾಗಗಳಲ್ಲಿ ನೀರು ತುಂಬಿಕೊಂಡಿದ್ದರೂ ರಾರಾಜಿಸುವ ತ್ಯಾಜ್ಯದ ನಡುವೆ ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ನೆಚ್ಚಿನ ತಾಣವಾಗಿದೆ.