

ಬಾಗೇಪಲ್ಲಿ : ಚಿತ್ರಾವತಿ ಅಣೆಕಟ್ಟೆಯಿಂದ ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರನ್ನು ಶುದ್ಧೀಕರಿಸದೆ ಸರಬರಾಜು ಮಾಡಲಾಗುತ್ತಿದೆ.
ನೀರು ಶುದ್ಧೀಕರಿಸಿ ಪೂರೈಸುವುದು ಪುರಸಭೆ ಜವಾಬ್ದಾರಿ, ಆದರೆ ಶುದ್ಧೀಕರಣ ಆಗುತ್ತಿಲ್ಲ, ಆಲಂಯಂತ್ರ (ಶುದ್ಧೀಕರಣ ಯಂತ್ರ) ದುರಸ್ತಿಯಾಗಿದ್ದು ಕ್ಲೋರಿನೇಷನ್ ವ್ಯವಸ್ಥೆಯನ್ನೇ ಹಾಳು ಮಾಡಲಾಗಿದೆ. ಸರಬರಾಜು ಆಗುತ್ತಿರುವ ನೀರು ವಾಸನೆಯಿಂದ ಕೂಡಿದೆ. ಇದರಿಂದಾಗಿ ಯೋಜನೆಯ ಮೂಲ ಆಶಯವೇ ಚಿತ್ರಾವತಿಯಲ್ಲಿ ಲೀನವಾದಂತಾಗಿದೆ.
ಘಟಕದ ಯಂತ್ರಗಳೆಲ್ಲ ಕ್ಷಮತೆ ಕಳೆದುಕೊಂಡಿವೆ ಎಂದು ಸಿಬ್ಬಂದಿಯೇ ಹೇಳುತ್ತಿದ್ದಾರೆ, ಆದರೆ ಮೇಲಧಿಕಾರಿಗಳು ಕೆಟ್ಟಿದ್ದರೆ ದುರಸ್ತಿ ಮಾಡುತ್ತೇವೆ ಎನ್ನುತ್ತಿದ್ದಾರೆಯೇ ಹೊರತು ಸಮರ್ಪಕ ನಿರ್ವಹಣೆಗೆ ಮನಸ್ಸು ಮಾಡಿಲ್ಲ. ಚಿತ್ರಾವತಿ ಸಿಹಿ ನೀರಾಗಿದೆ, ಆದರೆ ಪ್ಲೊರೈಡ್‌ಯುಕ್ತ ನೀರನ್ನೇ ಪೂರೈಕೆ ಮಾಡಲಾಗುತ್ತಿದ್ದು ಪಟ್ಟಣವಾಸಿಗಳು ಇದನ್ನೇ ಜೀವಜಲವೆಂದು ಕುಡಿಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಯೋಜನೆಯ ಹಿನ್ನೆಲೆ : ಅಂತರ್ಜಲ ಪ್ಲೋರೈಡ್‌ಯುಕ್ತವಾಗಿದ್ದು, ಈ ನೀರು ಸೇವನೆಯಿಂದ ಪ್ಲೋರೋಸಿಸ್ ಕಾಯಿಲೆಗೆ ತುತ್ತಾಗುತ್ತಿದ್ದ ಹಿನ್ನೆಲೆಯಲ್ಲಿ ಚಿತ್ರಾವತಿ ಅಣೆಕಟ್ಟು ಯೋಜನೆ ನಿರ್ಮಿಸಿ ಪ್ಲೋರೈಡ್ ರಹಿತ, ಶುದ್ಧ ಕುಡಿಯುವ ನೀರಿನ ಯೋಜನೆಗೆ ಮುಂದಾಗಲಾಗಿತ್ತು. ಅದರಂತೆ ಪಟ್ಟಣ ಹೊರವಲಯದ ಪರಗೋಡುವಿನ ಬಳಿ ಅಣೆಕಟ್ಟೆ ನಿರ್ಮಿಸಿ ಶುದ್ಧೀಕರಿಸಿದ ನೀರು ಸರಬರಾಜು ಮಾಡಬಹುದು ಎಂಬ ಪ್ರಸ್ತಾವನೆಯಂತೆ ಎಸ್.ಎಂ ಕೃಷ್ಣ ಸರ್ಕಾರದಲ್ಲಿ (2006ರಲ್ಲಿ) ಹಸಿರು ನಿಶಾನೆ ದೊರೆತು ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿತ್ತು.
ಶುದ್ಧೀಕರಣ ಪ್ರಕ್ರಿಯೆ : ಸ್ಪಟಿಕವನ್ನು (ಆಲಂ) ರುಬ್ಬಿ ನೀರಿಗೆ ಬಿಡಬೇಕು, ಕ್ಲೋರಿನೇಷನ್ ಮಾಡಬೇಕು, ಬ್ಲೀಚಿಂಗ್ ಪೌಡರ್‌ನಿಂದ ನೀರು ಶೇಖರಿಸುವ ತೊಟ್ಟಿಗಳನ್ನು ಸ್ವಚ್ಛ ಮಾಡಬೇಕು, ಪ್ರತಿ ಮೂರು ತಿಂಗಳಿಗೊಮ್ಮೆ ತೊಟ್ಟಿಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಬೇಕು, ನೀರಿನಲ್ಲಿ ಧೂಳು, ಕಸ ಇಲ್ಲದಂತೆ ಶೋಧಿಸಿ, ಶುದ್ಧೀಕರಿಸಿ ಪೂರೈಕೆ ಮಾಡುವುದು ಶುದ್ಧೀಕರಣ ಪ್ರಕ್ರಿಯೆ ಎಂದು ತಜ್ಞರು ಹೇಳುತ್ತಾರೆ, ಆದರೆ ಇಲ್ಲಿ ಇದ್ಯಾವುದನ್ನೂ ಮಾಡುತ್ತಿಲ್ಲ. ನೀರಿನಲ್ಲಿ ಧೂಳು, ಕಸಕಡ್ಡಿ ಬರುತ್ತಿದೆ ಎಂಬುದು ನಿವಾಸಿಗಳ ದೂರು.