ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ ಮತ್ತಿಬ್ಬರು ಆರೋಪಿಗಳ ಬಂಧನ

murder
Published on

ಬಂಟ್ವಾಳ: ಇಲ್ಲಿನ ಭಂಡಾರಿಬೆಟ್ಟುವಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿವಾಸಿ ಪ್ರತೀಕ್ (27) ಹಾಗೂ ಮಂಗಳೂರು ಬೋಂದೆಲ್ ಕೊಂಚಾಡಿ ನಿವಾಸಿ ಜಯೇಶ್ ಯಾನೆ ಸಚ್ಚು (28) ಬಂಧಿತರು. ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.

ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳ ಸಂಖ್ಯೆ 11ಕ್ಕೇರಿದೆ. ಪ್ರಮುಖ ಆರೋಪಿ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್, ನೀರುಮಾರ್ಗ ನಿವಾಸಿ ಗಿರೀಶ್ ಎಂಬುವರನ್ನು ಆರಂಭದಲ್ಲಿ ಬಂಧಿಸಲಾಗಿತ್ತು. ಇವರ ವಿಚಾರಣೆ ವೇಳೆ ಪ್ರದೀಪ್ ಕುಮಾರ್ ಯಾನೆ ಪಪ್ಪು, ಶರೀಫ್ ಯಾನೆ ಸಯ್ಯದ್ ಶರೀಫ್, ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ್ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ಆಕಾಶಭವನ ಶರಣ್ ಹತ್ಯೆಗೆ ಸಂಚು ರೂಪಿಸಿದ್ದ ಮಾಹಿತಿ ಲಭ್ಯವಾಗಿತ್ತು.

ವಾಹನದ ವ್ಯವಸ್ಥೆ ಮಾಡಿದ್ದ ದಿವ್ಯರಾಜ್, ಅನಿಲ್ ಪಂಪ್‌ವೆಲ್ ಆರೋಪಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದ ಉಜಿರೆ ನಿವಾಸಿ ರಾಜೇಶ್‌ನನ್ನು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪ್ರತೀಕ್, ಜಯೇಶ್ ಬಗ್ಗೆ ಮಾಹಿತಿ ಸಿಕ್ಕಿತು.

ಹಣ ಪಡೆದು ಆಶ್ರಯ ನೀಡಿದ ಆರೋಪ: ಪ್ರತೀಕ್, ಸತೀಶ್ ಮತ್ತು ಗಿರೀಶ್ ತಲೆಮರೆಸಿಕೊಳ್ಳಲು, ಆಶ್ರಯ, ವಾಹನ ಮತ್ತು ಹಣದ ವ್ಯವಸ್ಥೆ ಮಾಡಿದ್ದು ಅದಕ್ಕಾಗಿಗಿ 2.5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ. ಇನ್ನೊರ್ವ ಬಂಧಿತ ಆರೋಪಿ ಜಯೇಶ್ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಹಾಗೂ ಆರೋಪಿ ಶರಣ್ ನಿರ್ದೇಶನದಂತೆ ಸುಪಾರಿ ಮೊತ್ತವನ್ನು ಆರೋಪಿ ಪ್ರದೀಪ್‌ನಿಂದ ಪಡೆದು ಹತ್ಯೆಗೆ ಸಹಕರಿಸಿದ್ದ. ಸುರೇಂದ್ರ ಬಂಟ್ವಾಳ್ ಅವರನ್ನು ಅ.20ರಂದು ಬಂಟ್ವಾಳದ ಭಂಡಾರಿಬೆಟ್ಟುವನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net