ಚಿತ್ರನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ

Published on

ಚಾಮರಾಜನಗರ: ಚಿತ್ರನಟ ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ನೀಡುರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡರ ಬಣದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ನಟ ಕಮಲ್ ಹಾಸನ್ ಭಾವಚಿತ್ರವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜೇಶ್ ಮಾತನಾಡಿ, ಕನ್ನಡ ಭಾಷೆ ಶಾಸೀಯ ಸ್ಥಾನಮಾನ ಮತ್ತು ಭವ್ಯ ಇತಿಹಾಸವನ್ನು ಒಳಗೊಂಡಿರುವ ಶ್ರೀಮಂತ ಭಾಷೆಯಾಗಿದೆ. ಕೋಟ್ಯಾಂತರ ಕನ್ನಡಿಗರ ಜೀವನಾಡಿಯಾಗಿರುವ ಹೆಮ್ಮೆಯ ಕನ್ನಡ ಭಾಷೆಗೆ ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡ ಭಾಷೆಯನ್ನು ಅವಮಾನಿಸಿದ್ದಾರೆ. ಕ್ಷಮೆ ಕೇಳಲ್ಲ ಎಂದು ಉದ್ದಟತನ ತೋರಿದ್ದಾರೆ. ಆಗಾಗಿ ರಾಜ್ಯ ಸರ್ಕಾರ, ಕರ್ನಾಟಕ ಚಲನಚಿತ್ರ ಮಂಡಳಿ ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಚಿತ್ರ ಬಿಡುಗಡೆ ಮಾಡಬಾರದು. ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.‘

ಈ ಕೂಡಲೇ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ಮುಂದಿನ ವಾರ ತೆರೆ ಕಾಣಲಿರುವ ಅವರ ಸಿನಿಮಾವನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡುತ್ತೇವೆ. ಚಿತ್ರ ಬಿಡುಗಡೆ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಚಾ.ನಗರ ತಾಲೂಕು ಅಧ್ಯಕ್ಷ ಹಂಡ್ರಕಳ್ಳಿ ಸಂತೋಷ್, ಮಹಿಳಾ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮೀ, ತಾಲೂಕು ಅಧ್ಯಕ್ಷೆ ಸುಮಾ, ರಾಘವೇಂದ್ರ, ರಮೇಶ್ ನಾಯಕ, ಮಹೇಶ್, ಕುಮಾರ್, ಸುಂದರ್, ಮಹಾದೇವಸ್ವಾಮಿ, ರೂಪೇಶ್, ರಾಜೇಂದ್ರ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net