

ಪಾಂಡವಪುರ : ಚಿತ್ರನಟ ಅಂಬರೀಶ್ ಅವರ ಸ್ನೇಹ, ಪ್ರೀತಿ ವಿಶ್ವಾಸ ಮತ್ತು ಕಾರ್ಯಕ್ಷಮತೆಯನ್ನು ರಾಜ್ಯದ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಬರೀಶ್ ಅವರ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತಾನಾಡಿದರು. ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಹೋದಾಗ ನಮ್ಮದು ಮಂಡ್ಯ ಎಂದು ಹೇಳಿದರೆ ‘ಅಂಬರೀಶ್ ಅಣ್ಣನ ಊರು ಎಂದು ಅನೇಕರು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಮಂಡ್ಯದ ಹೆಸರಿನೊಂದಿಗೆ ಅಂಬರೀಶ್ ಅವರ ಹೆಸರು ಬೆರೆತು ಹೋಗಿದೆ. ಚಿತ್ರನಟ ಅಂಬರೀಶ್ ಅವರ ನೆನಪು ಸದಾ ಹಸಿರು ಎಂದರು.
ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಅಂಬರೀಶ್ ಅವರು ಕಲಿಯುಗದ ಕರ್ಣ ಎಂಬ ಬಿರುದು ಪಡೆದಿದ್ದರು. ಅಜಾತ ಶತ್ರುವಾಗಿದ್ದ ಅವರಿಗೆ ಹೊರ ದೇಶದಲ್ಲೂ ಉತ್ತಮ ಸ್ನೇಹಿತರು ಇದ್ದರು ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ್ ಮತ್ತು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಅಂಬರೀಶ್ ಅಭಿಮಾನಿಗಳಾದ ಸ್ವಾಮಿಗೌಡ, ಎಲೆಕೆರೆ ಈರೇಗೌಡ, ತಮ್ಮಣ್ಣ, ಮೋಹನ್ ಸಿಂಗ್ ಇತರರು ಇದ್ದರು.