

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಒಮ್ಮೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದನ್ನು ಹೊರತು ಪಡಿಸಿದರೆ ಅಭ್ಯರ್ಥಿಗಳ ಸಂಖ್ಯೆ ಇಬ್ಬರಿಗಿಂತ ಅಧಿಕವಾಗಿದೆ.
ಈ ಸಂಖ್ಯೆ ನಂತರದ ಹಲವು ಚುನಾವಣೆಗಳಲ್ಲಿ ಡಬಲ್ ಡಿಜಿಟ್‌ಗೆ ತಲುಪಿದ್ದನ್ನು ಗಮನಿಸ ಬಹುದಾಗಿದೆ. 1952ರಿಂದ 2019ರವರೆಗೆ ಅನೇಕರು ಇಲ್ಲಿಂದ ಲೋಕಸಭೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ.
ಮೊದಲ ಚುನಾವಣೆಯಲ್ಲಿ (1952) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಿಂದ ಎಸ್.ನಿಜಲಿಂಗಪ್ಪ ಗೆಲುವು ಸಾಧಿಸಿದ್ದರು. ಇವರು ಸೇರಿ ಮೂವರು ಆಗ ಕಣದಲ್ಲಿದ್ದರು. 1957ರಲ್ಲಿ ನಡೆದಿದ್ದ 2ನೇ ಚುನಾವಣೆಯಲ್ಲಿ ಭಾರತೀಯ ಪ್ರಜಾಸೋಶಿಯಲಿಸ್ಟ್ ಪಕ್ಷದ ಜೆ.ಎಂ.ಮಹ್ಮದ್ ಇಮಾಮ್ ಹಾಗೂ ಕಾಂಗ್ರೆಸ್ಸಿನ ಎಸ್.ರಂಗರಾವ್ ನಡುವಿನ ಸ್ಪರ್ಧೆಯಲ್ಲಿ ಮಹಮ್ಮದ್ ಇಮಾಮ್ ಗೆಲುವು ಸಾಧಿಸಿದ್ದರು.
ನಂತರದ 1962ರ ಚುನಾವಣೆಯಲ್ಲಿ ಎಸ್.ವೀರಬಸಪ್ಪ ಗೆದ್ದಿದ್ದರು. ಇವರು ಸೇರಿ ಮೂವರು ಹಾಗೂ 1967ರಲ್ಲಿ ಗೆದ್ದಿದ್ದ ಸ್ವತಂತ್ರ ಪಾರ್ಟಿಯ ಜೆ.ಎಂ.ಮಹ್ಮದ್ ಇಮಾಮ್ ಸಹಿತ ನಾಲ್ವರು ಹಾಗೂ 1971ರಲ್ಲಿ ಗೆಲುವು ಸಾಧಿಸಿದ್ದ ಎನ್‌ಪಿಜೆಯಿಂದ ಕೊಂಡಜ್ಜಿ ಬಸಪ್ಪ ಸಹಿತ ಮೂವರು ಕಣದಲ್ಲಿದ್ದರು.
ಚಿತ್ರದುರ್ಗ-ದಾವಣಗೆರೆ ಕ್ಷೇತ್ರಗಳು ಪ್ರತ್ಯೇಕ ಬಳಿಕ ಚಿತ್ರದುರ್ಗದ ಚುನಾವಣೆಯಲ್ಲಿ (1977) ಕಾಂಗ್ರೆಸ್ಸಿನ ಕೆ.ಮಲ್ಲಣ್ಣ ಆಯ್ಕೆಯಾಗಿದ್ದರು. ಭಾರತೀಯ ಲೋಕದಳದ ಅಭ್ಯರ್ಥಿ ಎಚ್.ಸಿ.ಬೋರಯ್ಯ, ಪಕ್ಷೇತರ ಅಭ್ಯರ್ಥಿ ಚಂದ್ರಶೇಖರಯ್ಯ ಸೇರಿ ಅಂದು ಮೂವರಿದ್ದರು.
ಮತ್ತೊಂದು ಚುನಾವಣೆಯಲ್ಲಿ (1980) ಮತ್ತೆ ಗೆಲುವು ಸಾಧಿಸಿದ್ದ ಕಾಂಗ್ರೆಸ್ಸಿನ ಕೆ.ಮಲ್ಲಣ್ಣ ಸೇರಿ ನಾಲ್ವರು ಹಾಗೂ 1984ರಲ್ಲಿ ಗೆದ್ದಿದ್ದ ಕಾಂಗ್ರೆಸ್ಸಿನ ಕೆ.ಎಚ್.ರಂಗನಾಥ್ ಸೇರಿ ಈ ಚುನಾವಣೆಯಲ್ಲಿ 11 ಅಭ್ಯರ್ಥಿಗಳಿದ್ದರು. 1989ರಲ್ಲಿ ಗೆಲುವು ಪಡೆದಿದ್ದ ಕಾಂಗ್ರೆಸ್ಸಿನ ಸಿ.ಪಿ.ಮೂಡಲಗಿರಿಯಪ್ಪ ಸೇರಿ 6 ಹಾಗೂ 1991ರಲ್ಲಿ ಮತ್ತೆ ಗೆಲುವು ಸಾಧಿಸಿದ್ದ ಕಾಂಗ್ರೆಸ್ಸಿನ ಮೂಡಲಗಿರಿಯಪ್ಪ ಸೇರಿ 7ಅಭ್ಯರ್ಥಿಗಳಿದ್ದರು.
1996ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದ ಜನತಾದಳದ ಪಿ.ಕೋದಂಡರಾಮಯ್ಯ ಸಹಿತ 17 ಅಭ್ಯರ್ಥಿಗಳಿದ್ದರು. 1998ರಲ್ಲಿ ಗೆದ್ದ ಕಾಂಗ್ರೆಸ್ಸಿನ ಸಿ.ಪಿ.ಮೂಡಲಗಿರಿಯಪ್ಪ ಸೇರಿ 6 ಹಾಗೂ 1999ರಲ್ಲಿ ಗೆಲವು ಸಾಧಿಸಿದ್ದ ಜನತಾದಳದ (ಯು) ಶಶಿಕುಮಾರ್ ಸಹಿತ ಮೂವರು ಹಾಗೂ 2004ರಲ್ಲಿ ಕಾಂಗ್ರೆಸ್ಸಿನ ಎನ್.ವೈ.ಹನುಮಂತಪ್ಪ ಸಹಿತ 6 ಅಭ್ಯರ್ಥಿಗಳು ಕಣದಲ್ಲಿದ್ದರು.
2009ರಲ್ಲಿ ಗೆದ್ದಿದ ಬಿಜೆಪಿ ಜನಾರ್ದನಸ್ವಾಮಿ ಸೇರಿ 11 ಮತ್ತು 2014ರಲ್ಲಿ ಗೆದ್ದಿದ್ದ ಕಾಂಗ್ರೆಸ್ಸಿನ ಬಿ.ಎಂ.ಚಂದ್ರಪ್ಪ ಸಹಿತ 14 ಅಭ್ಯರ್ಥಿಗಳು ಹಾಗೂ 2019ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಎ.ನಾರಾಯಣಸ್ವಾಮಿ ಅವರು ಸೇರಿ 19 ಅಭ್ಯರ್ಥಿಗಳಿದ್ದರು.
ಈ ಬಾರಿ ನಡೆಯಲಿರುವ 2024ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೋವಿಂದ ಎಂ.ಕಾರಜೋಳ, ಕಾಂಗ್ರೆಸ್ಸಿನಿಂದ ಬಿ.ಎನ್.ಚಂದ್ರಪ್ಪ ಸೇರಿ 20 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
*ಡಬಲ್ ಬ್ಯಾಲೆಟ್ ಎಲ್ಲೆಲ್ಲಿ?
ಅಭ್ಯರ್ಥಿಗಳ ಸಂಖ್ಯೆ 15 ಮೀರಿದರೆ ಡಬಲ್ ಬ್ಯಾಲೆಟ್‌ಗಳ ಬಳಕೆ ಅನಿವಾರ‌್ಯವಾಗಿದೆ. ಇದರಿಂದ ಕೌಂಟಿಂಗ್ ಪ್ರಕ್ರಿಯೆ ಕೂಡಕೊಂಚ ವಿಳಂಬವಾಗುವುದನ್ನು ತಳ್ಳಿ ಹಾಕುವಂತಿಲ್ಲ. ರಾಜ್ಯದಲ್ಲಿ ಮೊದಲ ಹಂತದಲ್ಲಿ (ಏ.16) ಚುನಾವಣೆ ನಡೆಯಲಿರುವ 14 ಕ್ಷೇತ್ರಗಳ ಪೈಕಿ ಚಿತ್ರದುರ್ಗ 20, ತುಮಕೂರು, ಮೈಸೂರು ಹಾಗೂ ಕೋಲಾರದಲ್ಲಿ ತಲಾ 18, ಬೆಂ.ಉತ್ತರ 21, ಬೆಂ.ದಕ್ಷಿಣ 22, ಚಿಕ್ಕಬಳ್ಳಾಪುರದಲ್ಲಿ 29 ಅಭ್ಯರ್ಥಿಗಳಿದ್ದಾರೆ. ಈ ಎಂಟು ಕ್ಷೇತ್ರಗಳಲ್ಲಿ ಡಬಲ್ ಬ್ಯಾಲೆಟ್ ಯೂನಿಟ್ ಬಳಕೆ ಆಗಲಿದೆ.
*ಹೆಚ್ಚುವರಿ ಬಿಯು ಪೂರೈಕೆ
ಡಬಲ್ ಬ್ಯಾಲೆಟ್‌ಗೆ ಪೂರಕವಾಗಿ ವಿವಿಧ ಕ್ಷೇತ್ರಗಳಿಗೆ ಹೆಚ್ಚುವರಿ ಬ್ಯಾಲೆಟ್ ಯೂನಿಟ್ (ಬಿಯು) ಗಳು ಪೂರೈಕೆಯಾಗಿವೆ. ರಾಯಚೂರಿಂದ ಚಿತ್ರದುರ್ಗಕ್ಕೆ ಬುಧವಾರ ಒಂದು ಸಾವಿರ ಬಿಯುಗಳು ಪೂರೈಕೆಯಾಗಿದೆ. ಇವುಗಳ ಮೊದಲ ಹಂತದ ತಪಾಸಣೆ ಏ.12ರಂದು ನಡೆಯಲಿದೆ.