

ಚಿತ್ರದುರ್ಗ: ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆರ್ಥಿಕ ಮತ್ತು ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಅಭಿವೃದ್ಧಿ ನಿಗಮಗಳಿಂದ, ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಕೊಡುವ ಸಾಲ ಸೌಲಭ್ಯದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕೆಂದು ನಿಗಮದ ಎಜಿಎಂ ಡಾ.ವಿಜಯಕುಮಾರ್ ಸಾಲ್ಕುಂಟೆ ಸೂಚಿಸಿದರು.
ಚಿತ್ರದುರ್ಗದಲ್ಲಿ ಸದ್ಯದಲ್ಲೇ ಆಯೋಜಿಸುವ ಸಾಲಮೇಳದ ಕುರಿತಂತೆ ಜಿಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಅಧಿಕಾರಿಗಳಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾಲದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನಿರ್ದೇಶನದಂತೆ ಜಿಲ್ಲೆಯಲ್ಲಿ ಚಿತ್ರದುರ್ಗದಲ್ಲಿ ಸಾಲಮೇಳ ಆಯೋಜಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಕುರಿ ಹಾಗೂ ಹಸು ಸಾಕಾಣಿಕೆ, ವಿವಿಧ ನಿಗಮಗಳು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅಂದಾಜು 30 ಸಾವಿರ ಫಲಾನುಭವಿ ಕುಟುಂಬಗಳಿಗೆ ಸಾಲ ನೀಡಬಹುದಾಗಿದೆ. ಆದರೆ, ಪ್ರಚಾರ ಕೊರತೆ ಹಿನ್ನೆಲೆಯಲ್ಲಿ ಹೆಚ್ಚಿನ ಅರ್ಜಿಗಳು ಬಂದಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೂಕ್ತ ಪ್ರಚಾರದ ಮೂಲಕ ಜನರಲ್ಲಿ ಸಾಲಮೇಳದೆಡೆ ಅರಿವು ಮೂಡಿಸಬೇಕು. ಫೆ.24ರೊಳಗೆ ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾ ಪಕರಿಗೆ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿದರು.
ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ತಿಪ್ಪೇಶ್ ಮಾತನಾಡಿ, ಬ್ಯಾಂಕ್‌ಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಹೆಚ್ಚು ಅರ್ಜಿಗಳ ಸಲ್ಲಿಕೆಗಾಗಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಎನ್‌ಎಸ್‌ಎಫ್‌ಡಿಸಿ ಮ್ಯಾನೇಜರ್ ವಿಜಯಲಕ್ಷ್ಮೀ, ಹೊಸದಿಲ್ಲಿಯ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ದೀಪಕ್‌ವರ್ಮಾ, ನಬಾರ್ಡ್ ಡಿಡಿಎಂ ಕವಿತಾ ಶಶಿಧರ್, ಮೂರು ಜಿಲ್ಲೆಗಳ ವಿವಿಧ ಇಲಾಖೆಗಳು ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳಿದ್ದರು.