

ಚಿತ್ರದುರ್ಗ: ಭಾರತ ಸಂವಿಧಾನದ ಕಲಾಕೃತಿ, ಚಂದ್ರಯಾನ-3, ಮಳೆ ನೀರು ಕೊಯ್ಲಿಗೆ ಹೆಸರಾಗಿರುವ ಇತಿಹಾಸ ಪ್ರಸಿದ್ಧ ಹೊಂಡಗಳು ಮೊದಲಾದ ನಾನಾ ಆಕರ್ಷಕ ಹೂವು-ಹಣ್ಣು, ತರಕಾರಿ ಕಲಾಕೃತಿಗಳೊಂದಿಗೆ ಫೆ.2 ರಿಂದ 4 ರವರೆಗೆ ನಗರದಲ್ಲಿ 31 ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ನಗ ರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಫೆ.2 ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರದರ್ಶನಕ್ಕೆ ಚಾಲನೆ ನೀಡುವರು ಎಂದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಅಂತಿಮ ಪ್ರತಿಯನ್ನು ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರ ಸಾದ್ ಅವರಿಗೆ 1949 ನವೆಂಬರ್ 25ರಂದು ಸಲ್ಲಿಸುತ್ತಿರುವ ಕಲಾಕೃತಿ ವಿವಿಧ ಹೂವುಗಳಲ್ಲಿ ತಯಾರಾಗಿ ನಿಂತಿದೆ. ಇಸ್ರೋದ ಚಂದ್ರಯಾನ-3 ರ ಸಾಧನೆ ಬಿಂಬಿಸುವ ಕಲಾಕೃತಿ ಇರಲಿದೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್‌ಪ್ರಜ್ಞಾನ್ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದು ವಿವರಿಸಿದರು.
ಮಳೆ ನೀರು ಕೊಯ್ಲಿಗೆ ಮಾದರಿಯಾಗಿರುವ ಕೋಟೆ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿಯರ ಹೊಂಡ, ಸಂತೆಹೊಂಡ ಫಲ- ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಗಳಾಗಿವೆ. ಹಿರಿಯೂರು ವಾಣಿವಿಲಾಸ ಸಾಗರ ಅಣೆಕಟ್ಟೆ ನಿರ್ಮಿಸಿದ, ಚಿತ್ರದುರ್ಗ ಚಿಕ್ಕಜಾಜೂರು ರೈಲ್ವೆ ಮಾರ್ಗ ಮತ್ತು ಚಿತ್ರದುರ್ಗದಿಂದ ಬೆಂಗಳೂರಿಗೆ 220 ಮೈಲಿ ರಸ್ತೆ ಮಾರ್ಗ ನಿರ್ಮಿಸಿ ಸಾರಿಗೆ ಸಂಪರ್ಕ ಸ್ಥಿರಗೊಳಿಸಿದ ಮಹಾನ್ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಕೃತಿ, ಸಮ ಸಮಾಜದ ಚಿಂತಕ ಬಸವಣ್ಣ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಶ್ರೀ ಪುಟ್ಟರಾಜ ಗವಾಯಿಗಳ ಕೃತಿಗಳು ಇಲ್ಲಿರಲಿವೆ ಎಂದು ಮಾಹಿತಿ ನೀಡಿದರು.
ಹಣ್ಣು ಮತ್ತು ತರಕಾರಿಯಲ್ಲಿ ಜ್ಞಾನಪೀಠಿಗಳು
ಹಣ್ಣು ಮತ್ತು ತರಕಾರಿ ಕೆತ್ತನೆಯಲ್ಲಿ ಅರಳಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಖ್ಯಾತ ಸಾಹಿತಿಗಳ ಕಲಾಕೃತಿಗಳು, ತೆಂಗಿನಚಿಪ್ಪಿನ ವಿವಿಧ ಕಲಾಕೃತಿಗಳು, ಜಲಪಾತಗಳ ಮಾದರಿ, ವೈಜ್ಞಾನಿಕವಾಗಿ ನೀರು ಬಳಕೆಯೊಂದಿಗೆ ವಿವಿಧ ತೋಟಗಾರಿಕೆ ಬೆಳೆಗಳ ಮಿಶ್ರ ಕೃಷಿ ಪದ್ಧತಿ ಮಾದರಿ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಲಿವೆ ಎಂದರು.
ನೂರಕ್ಕೂ ಹೆಚ್ಚು ಬಗೆಯ ತಳಿಗಳ ವಿವಿಧ ಹೂವು, ಪುಷ್ಪ ಸಸಿಗಳು, ಹಣ್ಣು, ತರಕಾರಿಗಳು ಹಲವು ವಿಶೇಷ ಬಗೆಯ ಅಲಂಕಾರಿಕ ಗಿಡ ಗಳು, ಇಕೆಬಾನ, ಬೋನ್ಸಾಯ್ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕ ಗಿಡಗಳ ಜೋಡಣೆ, ಸರ್ಕಾರದ ಯೋಜನೆಗಳ ಮಾಹಿತಿ, ಸ್ತ್ರೀಶಕ್ತಿ ಸಂಘಗಳ ಸ್ಥಳೀಯ ಉತ್ಪನ್ನಗಳ ಮಾರಾಟವಿರುತ್ತದೆ ಎಂದು ತಿಳಿಸಿದರು.
ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ ಬೇದ್ರೆ ಇದ್ದರು.
ವಿದ್ಯಾರ್ಥಿಗಳಿಗೆ ಸ್ಪರ್ಧೆ
ಪ್ರದರ್ಶನದ ಅಂಗವಾಗಿ ನಗರದ ಶಾಲಾ ಮಕ್ಕಳಿಗೆ ಜಾನಪದ, ಭಾವಗೀತೆ, ಚಿತ್ರಕಲೆ, ಪ್ರಬಂಧ, ಹಣ್ಣು ಮತ್ತು ಹೂ ತರಕಾರಿಗಳಿರುವ ಫ್ಯಾನ್ಸಿ ಡ್ರೆಸ್ಸ್, ರಂಗೋಲಿ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ, ತರಕಾರಿ ಕೆತ್ತನೆ, ಹೂವು ಜೋಡಣೆ, ಬೋನ್ಸಾಯ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ಬಹುಮಾನ, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
(ಸಿಟಿಡಿ 31 ಫಲ-ಪುಷ್ಪ)
ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಫಲ-ಪುಷ್ಪ ಪ್ರದರ್ಶನದ ಕುರಿತು ಜಿಪಂ ಸಿಇಒ ಎಸ್.ಜೆ.ಸೋಮವಾರ ಬುಧವಾರ ಪತ್ರಿಕಾಗೋ ಷ್ಠಿಯಲ್ಲಿ ಮಾಹಿತಿ ನೀಡಿದರು. ಜಿ.ಸವಿತಾ, ಬಿ.ದೇವರಾಜು, ನಾಗರಾಜ್ ಬೇದ್ರೆ ಇದ್ದರು.