

ಚಿತ್ರದುರ್ಗ: ಕೋಟೆನಗರಿ ಸೇರಿ ಸೇರಿ ಜಿಲ್ಲಾದ್ಯಂತ ಭಾನುವಾರ ಶ್ರದ್ಧಾಭಕ್ತಿಯಿಂದ ನಾಗ ಚತುರ್ಥಿ ಹಬ್ಬವನ್ನು ಆಚರಿಸಲಾಯಿತು.
ಹಬ್ಬದ ಅಂಗವಾಗಿ ನಾಗರಕಟ್ಟೆಗಳು ಶುಚಿಗೊಂಡಿದ್ದವು. ಭಕ್ತರು ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅರಳು ಬೀರಿ, ಹಾಲೆರೆದು ಭಕ್ತಿ ಸಮರ್ಪಿಸಿದರು.
ಚಿತ್ರದುರ್ಗದ ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ಬನ್ನಿ ಮಹಾಕಾಳಿಕಾಂಬ, ಕಾಳಿ ಕಮಠೇಶ್ವರಿ ದೇಗುಲ, ಜೋಗಿಮಟ್ಟಿ, ಕಾಮನಬಾವಿ ಬಡಾವಣೆ, ರಂಗಯ್ಯನ ಬಾಗಿಲು ಸೇರಿ ವಿವಿಧ ಬಡಾವಣೆಗಳಲ್ಲಿ ನಾಗರಕಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂದವು.
ಮಹಿಳೆಯರು ಮಡಿಯಿಂದ ತಯಾರಿಸಿದ್ದ ಚಿಗಳಿ, ಅರಳಿಟ್ಟು, ತಂಬಿಟ್ಟು, ಕಡಲೆಕಾಳು, ಅರಳು, ಗೆಜ್ಜೆ ವಸ್ತ್ರ, ತೆಂಗಿನಕಾಯಿ, ಬಾಳೆಹಣ್ಣು, ತುಪ್ಪದ ದೀಪ ಸೇರಿ ಪೂಜಾ ಸಾಮಗ್ರಿ ಜತೆ ನಾಗರಕಟ್ಟೆಗಳಿಗೆ ತೆರಳಿ ಪೂಜೆ ಸಲ್ಲಿಸುವುದರಲ್ಲಿ ನಿರತರಾಗಿದ್ದರು.
ಪೂಜೆ ನೆರವೇರಿಸಿ, ಇಷ್ಟಾರ್ಥ ಈಡೇರಿಸುವಂತೆ ನಾಗದೇವರನ್ನು ಪ್ರಾರ್ಥಿಸಿದರು. ಕೆಲವರು ಬೆಳ್ಳಿ ಮತ್ತು ಚಿನ್ನದ ನಾಗರವನ್ನು ಅರ್ಪಿಸುವ ಸಂಪ್ರದಾಯವೂ ಕಂಡು ಬಂದಿತು.
ನಾಗಚತುರ್ಥಿ ದಿನ ಹಾಲನ್ನೆರೆದ ನಂತರ ಕೆಲವರು ಹುತ್ತದ ಮಣ್ಣನ್ನು ಮನೆಗೆ ತಂದು ಅದರಿಂದ ನಾಗದೇವತೆ ನಿರ್ಮಿಸಿ, ನಾಗರ ಪಂಚಮಿಯಂದು ಮನೆಗಳಲ್ಲಿ ಹಾಲನ್ನು ಎರೆದು ಕುಟುಂಬದ ಶ್ರೇಯಸ್ಸಿಗೆ ಪ್ರಾರ್ಥಿಸುವರು.
ಚತುರ್ಥಿ, ಪಂಚಮಿಯಂದು ಹಬ್ಬವನ್ನಾಚರಿಸದ ಕೆಲವರು ಶ್ರಾವಣ ಮಾಸ, ಗೌರಿ-ಗಣೇಶ ಹಬ್ಬ ಮುಗಿಯುವುದರೊಳಗೆ ಯಾವುದಾದರೂ ಒಂದು ದಿನ ನಾಗದೇವರಿಗೆ ಹಾಲು ಎರೆಯುವ ಮೂಲಕ ಭಕ್ತಿ ಸಮರ್ಪಿಸಲಿದ್ದಾರೆ.