

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿ ಕಚೇರಿಯ ಅಧಿಕಾರಿಗಳು ಇತ್ತೀಚೆಗೆ ಚಿತ್ರದುರ್ಗದಲ್ಲಿ ದಾಳಿ ಕಾರ್ಯಾಚರಣೆ ನಡೆಸಿ ಸುಮಾರು 7500 ಮೀಟರ್ ನಷ್ಟು ನಕಲಿ ಎಚ್ಡಿಪಿಇ ಪೈಪ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಎಎಚ್ಕೆ ಪೈಪ್ ಇಂಡಿಸ್ಟ್ರೀಸ್ನ ಮೇಲೆ ದಾಳಿ ನಡೆಸಿದಾಗ ಬಿಐಎಸ್ ಲೈಸನ್ಸ್ ಇಲ್ಲದೇ ಐಎಸ್ಐ ಮಾರ್ಕ್ ಬಳಸಿ ಎಚ್ಡಿಪಿಇ ಫೈಪ್ ತಯಾರಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂಥ ನಕಲಿ ಐಎಸ್ಐ ಮಾರ್ಕಿನ ಉತ್ಪನ್ನಗಳ ಮಾರಾಟವನ್ನು ತಡೆಯುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ. ಯಾವುದೇ ಉತ್ಪನ್ನಗಳ ಉತ್ಪಾದಕರು ಐಎಸ್ಐ ಮಾರ್ಕ್ ದುರ್ಬಳಕೆ ಮಾಡಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಬಿಐಎಸ್ ಹುಬ್ಬಳ್ಳಿ ಶಾಖೆ ಕಚೇರಿಯ ಅಧಿಕಾರಿ ವಿಜಯವಿರನ್ ಕೆ. ತಿಳಿಸಿದ್ದಾರೆ.