

ಚಿತ್ರದುರ್ಗ: ಅತ್ಯಂತ ಪ್ರಾಚೀನ ಶಿಲಾಯುಗದ ಕಾಲದಿಂದಲೂ ಚಿತ್ರದುರ್ಗದಲ್ಲಿ ಮನುಷ್ಯ ಜೀವಿಸಿದ್ದ. ಹೀಗಾಗಿ ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ ಎಂದು ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.
ಕೋಟೆ ಸಮೀಪವಿರುವ ಡಾರ್ಮೆಟ್ರಿಯಲ್ಲಿ ಚಿಂತನಶೀಲ ಸಮಾಜಮುಖಿಯಿಂದ ಶುಕ್ರವಾರ ನಡೆದ ನೋಡ ಕರ್ನಾಟಕ-15 ಪರಿಸರ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮೆರಿಕಾದ ಪ್ರಖ್ಯಾತ ಭೂ ವಿಜ್ಞಾನಿ ಸಿರಿ ಪೊನ್ನಂ ಪೆರುಮ ಹೇಳಿಕೆ ಪ್ರಕಾರ 380 ಕೋಟಿ ವರ್ಷದ ಹಿಂದೆ ಚಿತ್ರದುರ್ಗದಲ್ಲಿ ಜೀವಿಯ ಉಗಮವಾಗಿತ್ತು. ಮನುಷ್ಯ ಇಲ್ಲಿ ವಾಸಿಸಿದ್ದ ಎಂಬುದಕ್ಕೆ ಪಳಿಯುಳಿಕೆಗಳು ಸಿಕ್ಕಿವೆ ಎಂದರು.
ಮಧ್ಯ ಕರ್ನಾಟಕದಲ್ಲೇ ಚಿತ್ರದುರ್ಗ ವಿಶೇಷ ಸ್ಥಳವಾಗಿದೆ. ಕಲಾವಿದರು, ಸಾಹಿತಿಗಳು, ಸಂಶೋಧಕರನ್ನು ನಾಡಿಗೆ ಪರಿಚಯಿಸಿದ ಪುಣ್ಯಭೂಮಿ ಚಿತ್ರದುರ್ಗ. ಕಲೆ, ಸಾಹಿತ್ಯ, ಸಂಸ್ಕೃತಿ ಒಳಗೊಂಡು ಎಲ್ಲ ಚಟುವಟಿಕೆ ನಡೆಸಲು ಹೇಳಿ ಮಾಡಿಸಿದ ಜಾಗವಿದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಪ್ರಮುಖ ರಾಜವಂಶಗಳಾದ ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರು, ಕಲ್ಯಾಣಿ ಚಾಲುಕ್ಯರು, ದುರ್ಗದ ಪಾಳೆಗಾರರು ಆಳ್ವಿಕೆ ನಡೆಸಿದ್ದಾರೆ. ಮಯೂರಶರ್ಮ ಕ್ಷತ್ರಿಯತ್ವ ಸ್ವೀಕರಿಸಿದ ನಂತರ ಮಯೂರವರ್ಮನಾಗಿ ಬದಲಾಗಿದ್ದು, ಇಲ್ಲಿಂದಲೇ ಎಂದರು.
ಆರು ಮೆದಕರಿನಾಯಕರು ಇಲ್ಲಿ ಆಳಿದ್ದಾರೆ.
ಮೊದಲ, ಎರಡನೇ ಹೀಗೆ ಆರನೇ ಮೆದಕರಿನಾಯಕನವರೆಗೂ ಹೈದರಾಲಿ ಜತೆ ಹೋರಾಟಗಳು ನಡೆದಿವೆ. ಸೂಳ್ಗಲ್ ಹೆಸರಿನ ಈಗಿನ ಚಂದ್ರವಳ್ಳಿ ಮೊಟ್ಟಮೊದಲ ಕದಂಬರ ರಾಜಧಾನಿಯಾಗಿತ್ತು ಎಂದು ವಿವರಿಸಿದರು.
ಚಂದ್ರಶೇಖರ ಬೆಳಗೆರೆ ಮಾತನಾಡಿ, ತಾಂತ್ರಿಕ ವೇಗಕ್ಕೆ ತಕ್ಕಂತೆ ಕನ್ನಡದ ಮನಸ್ಸುಗಳನ್ನು ಸಿದ್ಧಗೊಳಿಸುವುದು ಸಮಾಜಮುಖಿ ಉದ್ದೇಶ. ಹೀಗಾಗಿ ಸಂಡೂರಿನಿಂದ ಆರಂಭಗೊಂಡ ಪರಿಸರ ನಡಿಗೆ ಜು.7 ರಿಂದ 9ರವರೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಸಂಚರಿಸಲಿದೆ ಎಂದರು.
ಸದಸ್ಯ ವೆಂಕಟೇಶ್, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ಕಲಾವಿದ ಡಿ.ಓ.ಮೊರಾರ್ಜಿ ಇತರರಿದ್ದರು.