ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ

CTD 18 K.S.NAVIN--00000
Published on

ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶುಕ್ರವಾರದಿಂದ ಎರಡು ದಿನಗಳ ಕಾಲ ಹೊಸದಿಲ್ಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸಭೆ ನಡೆಸುತ್ತಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆ ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಚುನಾವಣೆ ಕುರಿತು, ಪಕ್ಷದ ನಾಯಕರು, ಶಾಸಕರು, ಸಂಸದರು, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ‌್ಯಕರ್ತರೊಂದಿಗೆ ಸಮಾಲೋಚನೆ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ಚುನಾವಣೆ ಸಂದರ್ಭದಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಬಾರಿ ಜೆಡಿಎಸ್ ಬೆಂಬಲವೂ ಇರುವುದರಿಂದ ಚಿತ್ರದುರ್ಗದಲ್ಲಿ ನಮ್ಮ ಗೆಲುವು ನಿಶ್ಚಿತ ಎಂದರು.
ಸ್ಥಳೀಯರು, ಹೊರಗಿನವರು ಎನ್ನುವುದಕ್ಕಿಂತ ಗೆಲುವಿನ ಮಾನದಂಡವನ್ನಾಧರಿಸಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಸ್ಥಳೀಯರೇ ಬೇಕು ಎಂದು ಕಾರ‌್ಯಕರ್ತರು ಹೇಳಿದರೆ ಪಕ್ಷ ಅದನ್ನು ಪರಿಶೀಲಿಸಲಿದೆ. ನಾರಾಯಣಸ್ವಾಮಿ ಗೆದ್ದ ಬಳಿಕ ನಮ್ಮವರೇ ಆಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬರಗಾಲವಿದ್ದರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಐಷರಾಮಿ ವಿಮಾನಗಳಲ್ಲಿ ಓಡಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸದೆ ವಿನಾಕಾರಣ ಕೇಂದ್ರದೆಡೆ ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ. ಬರಪರಿಹಾರ ಸಂದಾಯ ಮಾಡುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿಕೆ ನೀಡಿ 10 ದಿನಗಳಾದರೂ ಜಾರಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net