ಚಿತ್ರದುರ್ಗ ರೈಲು ನಿಲ್ದಾಣ ನಿರ್ಮಾಣದ ಆಮೆಗತಿಗೆ ಸಂಸದ ಗರಂ

CTD NEWS MP VISIT ----
Published on

ಚಿತ್ರದುರ್ಗ: ಕೇಂದ್ರದ ಅಮೃತ್ ಯೋಜನೆಯಡಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಗರದ ರೈಲು ನಿಲ್ದಾಣ ಕಾಮಗಾರಿ ವಿಳಂಬಕ್ಕೆ ಸಂಸದ ಗೋವಿಂದ ಎಂ. ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, 2023 ಡಿಸೆಂಬರ್ ಅಂತ್ಯದಲ್ಲಿ ಕಾರ್ಯಾದೇಶ ನೀಡಿದ್ದರೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಹಾಗೂ ನಿಗಾ ವಹಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗರಂ ಆದರು.

ದೇಶಾದ್ಯಂತ 1300 ರೈಲು ನಿಲ್ದಾಣಗಳು ಅಮೃತ್ ಯೋಜನೆಯಡಿ ಹೊಸದಾಗಿ ನಿರ್ಮಾಣವಾಗುತ್ತಿವೆ. ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಆದರೆ, ಚಿತ್ರದುರ್ಗ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಡಿಸೆಂಬರ್ 31ಕ್ಕೆ ಉದ್ಘಾಟಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು ಹಾಗೂ ನಿಯಮಾನುಸಾರ ದಂಡವನ್ನೂ ವಿಧಿಸುವಂತೆ ಸೂಚಿಸಿದ ಅವರು, ಥರ್ಡ್‌ಪಾರ್ಟಿ ಇನ್ಸ್‌ಪೆಕ್ಷನ್‌ಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಸಂಸದರು, ಚಿಕ್ಕಜಾಜೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿವರೆಗೆ 185 ಕಿ.ಮಿ. ರೈಲ್ವೇ ಮಾರ್ಗದ ಡಬ್ಲಿಂಗ್‌ಗೆ ಕೇಂದ್ರ ಸರ್ಕಾರ 3400 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. ಐದು ವರ್ಷದೊಳಗೆ ಡಬ್ಲಿಂಗ್ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದೆ ಎಂದರು.

ಈ ದ್ವಿಪಥ ಮಾರ್ಗದಿಂದ ವ್ಯಾಪಾರ, ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲವಾಗುವುದರೊಂದಿಗೆ ಉದ್ಯೋಗಾವಕಾಶ ಹೆಚ್ಚಾಗಲಿದೆ. ನನೆಗುದಿಯಲ್ಲಿದ್ದ ಪಾವಗಡ-ಮಡಕಶಿರ ರೈಲು ಮಾರ್ಗಕ್ಕೆ 265 ಕೋಟಿ ರೂ. ಹಾಗೂ ತುಮಕೂರು-ಚಿತ್ರದುರ್ಗ- ದಾ ವಣಗೆರೆ ನೇರ ರೈಲು ಮಾರ್ಗಕ್ಕೆ ಈ ಬಜೆಟ್‌ನಲ್ಲಿ 550 ಕೋಟಿ ರೂ. ಬಿಡುಗಡೆ ಆಗಿದೆ ಎಂದು ತಿಳಿಸಿದರು.

ಈ ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ರಾಜ್ಯಸರ್ಕಾರ ಪೂರ್ಣಗೊಳಿಸಬೇಕಿದೆ. ಚಿತ್ರದುರ್ಗ ನಗರದ ರೈಲು ನಿಲ್ದಾಣ ಬಳಿ ಆರ್‌ಒಬಿ ನಿರ್ಮಾಣಕ್ಕೆ ರಾಜ್ಯಸರ್ಕಾರ 4.10 ಎಕರೆ ಭೂಮಿ ಕೊಡಬೇಕಿದೆ. ಈ ಆರ್‌ಒಬಿ ಸೇರಿ ಹಳಿಯೂರು ಹಾಗೂ ಚಿಕ್ಕಜಾಜೂರು ರೈಲ್ವೇಗೇಟ್ ಆರ್‌ಒಬಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಅನುದಾನ ಮಂಜೂರು ಮಾಡಿದೆ ಎಂದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಎ. ಮುರುಳಿ, ಖಜಾಂಚಿ ಮಾಧುರಿ ಗಿರೀಶ್, ದಗ್ಗೆ ಶಿವ ಪ್ರಕಾಶ್, ಡಿ.ಒ. ಮುರಾರ್ಜಿ, ರೈಲ್ವೇ ಗತಿಶಕ್ತಿ ವಿಭಾಗದ ಡೆಪ್ಯೂಟಿ ಸಿಪಿಎಂ ಶ್ರೀನಿವಾಸಲು, ಜೆಇ ವಸಂತ್, ಪ್ರಾಜೆಕ್ಟ್ ಮ್ಯಾನೇಜರ್ ಪ್ರದೀಪ್, ಪ್ರಾಜೆಕ್ಟ್ ಇಂಜಿನಿಯರ್ ಕಾರ್ತಿಕ್ ಕೆ. ರಾಥೋಡ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net