ಚಿತ್ರದುರ್ಗ ಜೈಲಿನಲ್ಲಿ ತೆಂಗಿನ ನಾರು ಉತ್ಪನ್ನ ಘಟಕ

CTD JAILU-----
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ನಾರು ಉತ್ಪನ್ನ ತಯಾರಿಕೆ ಘಟಕ ಸ್ಥಾಪನೆ ಹಾಗೂ ಉತ್ಪನ್ನಗಳ ಮಾರಾಟಕ್ಕೆ ಕಾರಾಗೃಹ ಇಲಾಖೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾರಾಗೃಹ ಅಭಿವೃದ್ಧಿ ಮಂಡಳಿಗೆ ರಾಜ್ಯ ತೆಂಗು ನಾರಿನ ಅಭಿವೃದ್ಧಿ ನಿಗಮ ಶೀಘ್ರವೇ ಯೋಜನಾ ವರದಿ ಸಲ್ಲಿಸಲಿದೆ.

ನಿಗಮದ ಅಧಿಕಾರಿಗಳು ಕಳೆದ ಆಗಸ್ಟ್‌ನಲ್ಲಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, 4 ತಿಂಗಳಾದರೂ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯ ಜೈಲು ಅಧಿಕಾರಿಗಳು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜ.4 ರಂದು ಪತ್ರ ಬರೆದು ಉತ್ಪನ್ನ ತಯಾರಿಕೆ ಘಟಕ ಸ್ಥಾಪನೆ ಕುರಿತು ನೆನಪು ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ನಿಗಮದ ಅಧಿಕಾರಿಗಳು ಶೀಘ್ರ ಯೋಜನಾ ವರದಿ ಸಲ್ಲಿಸುವುದಾಗಿ ಭರವಸೆ ಕೊಟ್ಟಿದ್ದಾರೆ

ತೆಂಗು ನಾರು ಸಂಗ್ರಹಕ್ಕೆ ಸಂಬಂಧಿಸಿದ 20/30 ಅಡಿ ವಿಸ್ತೀರ್ಣದ ಶೆಡ್, ಯಂತ್ರೋಪಕರಣ ಹಾಗೂ ತರಬೇತಿಗೆ ಅಗತ್ಯ ಸ್ಥಳಾವಕಾಶ ಒದಗಿಸುವ ಕುರಿತಂತೆ ನಿಗಮದ ಸಿಇ ಶಿವಕುಮಾರ್, ಕಳೆದ ಆಗಸ್ಟ್ 26 ರಂದು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕಳೆದ 15 ವರ್ಷಗಳಿಂದ ಈ ಉತ್ಪನ್ನಗಳ ತಯಾರಿಕೆ ಘಟಕವಿದೆ. ದುರ್ಗದಲ್ಲಿ ಆರಂಭಿಸುವ ಘಟಕಕ್ಕೆ ಕಚ್ಚಾವಸ್ತು, ಯಂತ್ರೋಪಕರಣ ಒದಗಿಸುವುದು, ಕೈದಿಗಳಿಗೆ ಪರಿವರ್ತನಾ ದರವನ್ನಾಧರಿಸಿ ಮಜೂರಿ ಕೊಡುವುದು ಹಾಗೂ ಸಿದ್ಧಪಡಿಸಿದ ಉತ್ಪನ್ನಗಳ ಖರೀದಿಸುವ ಭರವಸೆಯನ್ನು ನಿಗಮ ಕೊಟ್ಟಿದೆಯಂತೆ.

ಚಿತ್ರದುರ್ಗದಲ್ಲೂ ಮೈಸೂರು ಮಾದರಿ ಘಟಕ ಸ್ಥಾಪಿಸುವಂತೆ ನಿಗಮ ಕಳೆದ ಜುಲೈನಲ್ಲೇ ಅಧೀಕ್ಷಕರನ್ನು ಕೋರಿತ್ತು. ಮ್ಯಾಟ್, ಹುರಿ ಸಹಿತ 25ಕ್ಕೂ ಹೆಚ್ಚು ನಾರಿನ ಉತ್ಪನ್ನಗಳ ತಯಾರಿಕೆ ಕುರಿತಂತೆ ಕೈದಿಗಳಿಗೆ ಒಂದೂವರೆ ತಿಂಗಳ ಅವಧಿ ತರಬೇತಿ ಕೊಡಲಾಗುತ್ತದೆ.

ತೋಟಗಾರಿಕೆಗೆ ಮುಂದಾದ ಕಾರಾಗೃಹ ಆಡಳಿತ

ಜಿಲ್ಲಾ ಕಾರಾಗೃಹ 19 ಎಕರೆ ಪ್ರದೇಶದಲ್ಲಿದೆ. 4 ಎಕರೆ ಕಾರಾಗೃಹ ಹಾಗೂ ಒಂದು ಎಕರೆ ವಸತಿಗೃಹ ಹೊರತುಪಡಿಸಿ, ಉಳಿದ ಪ್ರದೇಶ ಅಂದಾಜು 10 ಎಕರೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ತೆಂಗು, ಅಡಕೆ ಅಥವಾ ತೋಟಗಾರಿಕೆ ಇಲಾಖೆಯ ಸಲಹೆಯನ್ನಾಧರಿಸಿ ತೋಟಗಾರಿಕೆ ಬೆಳೆಗಳಿಗೆ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಜೈಲು ಆವರಣದಲ್ಲಿರುವ ನೆಡು ತೋಪನ್ನು ನಿಯಮಾನುಸಾರ ತೆರವುಗೊಳಿಸಿ ತೋಟಗಾರಿಕೆ ಬೆಳೆಗಳಿಗೆ ಬಳಸಿಕೊಳ್ಳುವ ಇರಾದೆ ಅಧಿಕಾರಿಗಳದ್ದಾಗಿದೆ.

ಅಂದಾಜು 1400 ತೆಂಗಿನ ಸಸಿ ನೆಡಲು ಕೂಡ ಅವಕಾಶವಿದೆಯಂತೆ. ಇಲ್ಲಿ ಹೈನುಗಾರಿಕೆಗೂ ಮುಂದಡಿ ಇಡುವ ಸಾಧ್ಯತೆ ಇದೆ.

ಕ್ರಮ ವಹಿಸಲಾಗುವುದು

ತೆಂಗಿನ ನಾರು ಉತ್ಪನ್ನಗಳ ತಯಾರಿಕೆ ಘಟಕ ಸ್ಥಾಪನೆ ಸಂಬಂಧ ಕಾರಾಗೃಹದ ಕೈದಿಗಳಿಗೆ ತರಬೇತಿ ಹಾಗೂ ಉತ್ಪನ್ನಗಳ ಖರೀದಿಗೆ ರಾಜ್ಯದ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಮುಂದೆ ಬಂದಿದೆ. ಜೈಲಿನ ಬಳಿಯೇ ಸ್ಟಾಲ್ ಕೂಡ ಸ್ಥಾಪಿಸಬಹುದಾಗಿದೆ. ಮೇಲಧಿಕಾರಿಗಳ ನಿರ್ದೇಶನದಂತೆ ಘಟಕ ಸ್ಥಾಪನೆಗೆ ಕ್ರಮ ವಹಿಸಲಾಗುವುದು.

ಸಿದ್ದರಾಮ ಬಿ. ಪಾಟೀಲ,

ಅಧೀಕ್ಷಕ, ಜಿಲ್ಲಾ ಕಾರಾಗೃಹ, ಚಿತ್ರದುರ್ಗ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net