ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರೈತರ ಆಕ್ರೋಶ

CTD 12 Protest 1
Published on

ಚಿತ್ರದುರ್ಗ: ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವ ಮೂಲಕ ರೈತ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಆರೋಪಿಸಿ ರೈತಸಂಘ ಹಾಗೂ ಹಸಿರುಸೇನೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣದ ಕಾರ್ಯಕರ್ತರು ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಬೆಸ್ಕಾಂ ಕಚೇರಿ ಎದುರು ಜಮಾಯಿಸಿ, ದಿನಕ್ಕೆ ಏಳು ಗಂಟೆ ಬದಲು ಮೂರ‌್ನಾಲ್ಕು ಗಂಟೆ ವಿದ್ಯುತ್ ನೀಡುತ್ತಿರುವ ಕಾರಣ ಬರಕ್ಕೆ ಅಳಿದುಳಿದ ಬೆಳೆಗಳು ಕೂಡ ಹಾಳಾಗುತ್ತಿವೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು- ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಬಳಿಕ ಬೆಸ್ಕಾಂ ಮೂಲಕ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ರವಾನಿಸಿದರು.

ಸಕಾಲಕ್ಕೆ ಮಳೆಯಾಗದೆ ಬೆಳೆಗಳು ನಾಶವಾಗಿವೆ. ಜಿಲ್ಲೆ ಬರದ ಪಟ್ಟಿಗೆ ಸೇರಿದೆ. ಕೊಳವೆಬಾವಿ ಆಶ್ರಯಿಸಿ ಕೃಷಿ, ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ನಿಯಮಾನುಸಾರ ಸಮರ್ಪಕ ವಿದ್ಯುತ್ ಏಕೆ ಪೂರೈಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾರ್ಖಾನೆಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ರೈತರ ಬಗ್ಗೆ ಏಕೆ ತಾತ್ಸಾರ ಎಂದು ಪ್ರಶ್ನಿಸಿದರು. ಪದೇ ಪದೆ ವ್ಯತ್ಯಯದಿಂದ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. 24 ಗಂಟೆಯೊಳಗೆ ಬದಲಿಸಬೇಕು ಎಂಬ ನಿಯಮವಿದ್ದರೂ ನಿರ್ಲಕ್ಷೃ ವಹಿಸಲಾಗುತ್ತಿದೆ ಎಂದು ಆಪಾದಿಸಿದರು.

ವಿದ್ಯುತ್ ಪೂರೈಸಲು ಸಾಧ್ಯವಾಗದಿದ್ದರೆ ಕೃಷಿಗೆ ಹಾಕಿದ ಸಂಪೂರ್ಣ ಬಂಡವಾಳವನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಒತ್ತಾಯಿಸಿದರು.

ಒಂದೇ ಕಡೆ 3 ವರ್ಷಕ್ಕಿಂತ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೂಡಲೇ ವರ್ಗಾಯಿಸಬೇಕು. ಅಕ್ರಮ-ಸಕ್ರಮದಡಿ ಹಣ ಪಾವತಿಸಿದವರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ರಾಮರೆಡ್ಡಿ, ಜಿ.ಟಿ.ವೆಂಕಟೇಶ್‌ರೆಡ್ಡಿ, ಎನ್.ಹನುಮಂತರೆಡ್ಡಿ, ವಿ.ಆರ್.ಸಂತೋಷ್ ರೆಡ್ಡಿ, ಶರತ್, ಎಂ.ಎಸ್.ಅಜಯ್, ಮಾರುತಿ, ಡಿ.ಟಿ.ವಿರೂಪಾಕ್ಷಪ್ಪ, ಗೋವಿಂದರೆಡ್ಡಿ, ಮಂಜುನಾಥರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net