

ಚಿತ್ರದುರ್ಗ: ಚಿತ್ರದುರ್ಗ-ಚಳ್ಳಕೆರೆ-ಪಾವಗಡ ನಡುವಿನ 120 ಕಿ.ಮೀ. ಉದ್ದದ ರಸ್ತೆಯನ್ನು ರಾ.ಹೆ.ಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಚಳ್ಳಕೆರೆ ತಾಲೂಕಿನ 8000 ಎಕರೆ ಪ್ರದೇಶದಲ್ಲಿ ಐಎಸ್‌ಎಸ್‌ಸಿ, ಇಸ್ರೋ, ಡಿಆರ್‌ಡಿಒ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ದೇಶದ ಪ್ರಮುಖ ನಗರವಾಗಿ ಮುನ್ನೆಲೆಗೆ ಬಂದಿದೆ ಎಂದರು.
ಚಳ್ಳಕೆರೆ ನಗರ ಪ್ರದೇಶದ 5.7 ಕಿ.ಮೀ. ರಸ್ತೆಯನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡೆಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆ ಬಳಿ ಹೆದ್ದಾರಿ ಕಾಮಗಾರಿಯಿಂದ ಬಿ.ಜಿ.ಕೆರೆ ಗ್ರಾಮ ಸೀಳಾಗಿದ್ದು, ನಿತ್ಯ ಜನರ, ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ಈ ಸಮಸ್ಯೆ ನಿವಾರಿಸಲು 1.48 ಕೋಟಿ ರೂ. ವೆಚ್ಚದಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.
ಹಿರಿಯೂರು-ಹುಳಿಯಾರು ಹೆದ್ದಾರಿ 31.3 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 26 ಕಿ.ಮೀ. ಹಾಗೂ ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿ 31.72 ಕಿ.ಮೀ. ಪೈಕಿ 26 ಕಿ.ಮೀ. ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗಳು 2 ತಿಂಗಳ ಒಳಗೆ ಪೂರ್ಣವಾಗಲಿವೆ ಎಂದು ತಿಳಿಸಿದರು.
ಕಡೂರು-ಹೊಸದುರ್ಗ ಹೊಸ ಹೆದ್ದಾರಿ 184 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಇದಕ್ಕೆ ಭೂಮಿ ಪೂಜೆ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿರುವ 353 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ 218 ಕಿ.ಮೀ.ನ್ನು ಎನ್‌ಎಚ್‌ಐ ನಿರ್ವಹಿಸುತ್ತಿದೆ. ಉಳಿದ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗ ನಿರ್ವಹಿಸುತ್ತಿದೆ ಎಂದರು.
ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯದ ಹೆದ್ದಾರಿ ಕಾಮಗಾರಿ ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿದೆ. ಹಿರಿಯೂರು ಬಳಿ 9 ಕಿ.ಮೀ. ಬಾಕಿ ಇದ್ದು, ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿಗೆ ಸೂಚಿಸಿರುವುದಾಗಿ ಹೇಳಿದರು.
ಡಿಸಿ ಟಿ.ವೆಂಕಟೇಶ್, ಎಸಿ ಎಂ.ಕಾರ್ತಿಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಇಇ ಮಲ್ಲಿಕಾರ್ಜುನ್ ಇದ್ದರು.