ಚಿತ್ರದಲ್ಲಿ ಅರಳಿದ ‘ನಮ್ಮ ಪರಿಸರ’

14Rajesh3
Published on

ಚಾಮರಾಜನಗರ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ನಗರದ ಉಪ್ಪಾರ ಬೀದಿಯಲ್ಲಿರುವ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಹಯೋಗದಲ್ಲಿ ಅಚ್ಚುಕಟ್ಟಾಗಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಿಯಾಶೀಲ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ) ಉದ್ಘಾಟನೆ ಮಾಡಿ ಮಾತನಾಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಉತ್ತಮ ವಿಚಾರ. ಸರ್ಕಾರಿ ಶಾಲೆಗಳ ಮಕ್ಕಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮಕ್ಕಳು ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಡಬೇಕು. ಗಿಡಗಳನ್ನು ನೆಟ್ಟರಷ್ಟೇ ಸಾಲದು ನೀರೆರೆದು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ನಿಸ್ವಾರ್ಥದ ಪ್ರತೀಕವೇ ಗಿಡ, ಮರಗಳು. ಯಾರೋ ನೆಟ್ಟ ಗಿಡದಲ್ಲಿ ಬೆಳೆದ ಹಣ್ಣನ್ನು ಮತ್ಯಾರೋ ತಿನ್ನುತ್ತಾರೆ. ಹೀಗೆ ಮತ್ತೊಬ್ಬರಿಗೆ ಆಹಾರ ನೀಡುವ ಗಿಡ, ಮರಗಳನ್ನು ಕಾಪಾಡಬೇಕು. ಪರಿಸರ ಸಂರಕ್ಷಣೆ ಎಂದರೆ, ನಮ್ಮ ಮತ್ತು ಅಕ್ಕ-ಪಕ್ಕದ ಮನೆಗಳಲ್ಲಿ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಾಗಿದೆ. ಗಿಡ, ಮರಗಳನ್ನು ರಕ್ಷಣೆ ಮಾಡುವುದಾಗಿದೆ. ಪರಿಸರವನ್ನು ಹಾಳಾಗದಂತೆ ನೋಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿದ್ದರೆ ರೋಗ-ರುಜಿನಗಳು ಬರುವುದಿಲ್ಲ. ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಶಾಲೆ ಮುಖ್ಯಶಿಕ್ಷಕ ವೆಂಕಟೇಶ್‌ನಾಯಕ್ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿರುವುದಕ್ಕೆ ಸಂತೋಷವಾಗಿದೆ ಎಂದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ, ಶಿಕ್ಷಕ ಎಸ್.ಪ್ರಕಾಶ್, ಎಂಸಿಎಸ್ ಶಾಲೆಯ ಚಿತ್ರಕಲಾ ಶಿಕ್ಷಕ ಸಿ.ಎನ್. ಸಂಪತ್‌ಕುಮಾರ್ ಮತ್ತು ಪಿಎಂಶ್ರೀ ಸರ್ಕಾರಿ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಕುಂಚಲದಲ್ಲಿ ಅರಳಿದ ‘ನಮ್ಮ ಪರಿಸರ’

ಸ್ಪರ್ಧೆಯಲ್ಲಿ ‘ನಮ್ಮ ಪರಿಸರ’ ವಿಷಯದ ಕುರಿತು ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಚಿತ್ರ ಬಿಡಿಸಿದರು. ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಂ.ಸಿ.ಎಸ್.ಪ್ರೌಢಶಾಲೆ, ದೊಡ್ಡಂಗಡಿ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕುಂಚದಲ್ಲಿ ಭಿನ್ನ ವಿಭಿನ್ನ ಮತ್ತು ವಿಶೇಷ ಚಿತ್ರಗಳನ್ನು ರಚನೆ ಮಾಡಿದರು. ಸುತ್ತಮುತ್ತಲಿನ ಪರಿಸರ, ಮನೆಯಂಗಳದಲ್ಲಿ ಬೆಳೆದಿರುವ ಗಿಡ, ಮರಗಳು, ದೂರದಲ್ಲಿ ಕಾಣುವ ಬೆಟ್ಟ, ಗುಡ್ಡ, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳು, ನದಿ, ತೊರೆಯನ್ನು ಬಣ್ಣ ಬಣ್ಣಗಳಿಂದ ಚಿತ್ರಿಸಿದ್ದರು. ಅಲ್ಲದೆ, ಮಾನವನ ಹಸ್ತಕ್ಷೇಪ, ಅಭಿವೃದ್ಧಿಯ ನೆಪದಲ್ಲಿ ಪರಿಸರದ ಮೇಲೆ ಆಗುತ್ತಿರುವ ದಾಳಿಯನ್ನು ಮಕ್ಕಳು ಚಿತ್ರದಲ್ಲಿ ಅಭಿವ್ಯಕ್ತಿಸಿದ್ದರು. ಪರಿಸರ ಮಾಲಿನ್ಯದಿಂದ ಭೂಮಿಗೆ ಎದುರಿಸುತ್ತಿರುವ ಪರಿಣಾಮಗಳನ್ನು ಚಿತ್ರದಲ್ಲಿ ಕಟ್ಟಿಕೊಟ್ಟರು. ಪರಿಸರವನ್ನು ಉಳಿಸಿಕೊಳ್ಳದಿದ್ದರೆ ಭವಿಷ್ಯ ನಾಶವಾಗುತ್ತದೆ ಎಂಬ ಸಂದೇಶವನ್ನು ಚಿತ್ರಿಸಿದರು. ಒಟ್ಟಾರೆಯಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ:

ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಗದು, ಕಲಿಕಾ ಸಾಮಗ್ರಿಗಳನ್ನು ಬಹುಮಾನವಾಗಿ ನೀಡಲಾಯಿತು. ವಿಜೇತರಿಗೆ ಪ್ರಥಮ ಬಹುಮಾನ 2 ಸಾವಿರ ರೂ., ದ್ವಿತೀಯ ಬಹುಮಾನ 1 ಸಾವಿರ ರೂ., ತೃತೀಯ ಬಹುಮಾನ 500 ರೂ. ಮತ್ತು ಸಮಾಧಾನಕರ ಬಹುಮಾನ ನೀಡುವುದಾಗಿ ೋಷಣೆ ಮಾಡಲಾಗಿತ್ತು. ಎಂಸಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮಿಂಚಿತಾ ಪ್ರಥಮ, ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಗಣೇಶ್ ದ್ವಿತೀಯ, ಎಂಸಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಎಂ.ಸ್ಫೂರ್ತಿ ತೃತೀಯ ಬಹುಮಾನ ಲಭಿಸಿತು. ಚಾಮರಾಜನಗರ- ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ) ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದು.

ದೊಡ್ಡಂಗಡಿ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿಶ್ವಾಸ್, ಎಂಸಿಎಸ್ ಶಾಲೆಯ ವಿದ್ಯಾರ್ಥಿಗಳಾದ ಬಿ.ಎಸ್.ಮನುಶ್ರೀ, ಸಿಂಚನಾ, ಧನುಷ್, ಮಧುಕುಮಾರ್, ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಕಾರ್ತಿಕ್, ಎಂ.ಮನೋಜ್, ಪ್ರಿಯಾ, ತೇಜು, ಜೀವನ್, ಮೋನಿಕಾ, ಧನುಷ್, ಸುರಕ್ಷಾ, ಅನಿಷಾ ಸಮಾಧಾನಕರ ಬಹುಮಾನವಾಗಿ ನೋಟ್‌ಬುಕ್ ಮತ್ತು ಪೆನ್‌ಗಳನ್ನು ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆಯ ಅಧ್ಯಕ್ಷ ಜಿ.ಬಂಗಾರು ವಿತರಣೆ ಮಾಡಿದರು. ತೀರ್ಪುಗಾರರಾಗಿ ಜಿಲ್ಲಾ ಚಿತ್ರಕಲಾವಿದರ ಸಂಘದ ಅಧ್ಯಕ್ಷ ರವಿತೇಜ್ ವೆಂಕಟಯ್ಯನಛತ್ರ ಜವಾಬ್ದಾರಿ ನಿರ್ವಹಿಸಿದರು.

ಆದರ್ಶ ಮೆರೆದ ಯುವ ವೇದಿಕೆ

ಸಾಮಾಜಿಕ ಮತ್ತು ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡುಬರುತ್ತಿದೆ. ಶನಿವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯನ್ನೂ ಸಹ ಅಚ್ಚುಕಟ್ಟಾಗಿ ಆಯೋಜಿಸಿದ್ದ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net