ಕಲಬುರಗಿ: ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ನ.೨೫ರಂದು ಸಂವಿಧಾನ ವಿಷಯದ ಆಧಾರದ ಮೇಲೆ ಚಿತ್ರಕಲಾ ಮತ್ತು ಟೈಕೋಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ತಿಳಿಸಿದ್ದಾರೆ. ಸ್ಪರ್ಧೆಯು ಎರಡು ವಿಭಾಗಳಲ್ಲಿ ನಡೆಯಲಿದೆ. ೧೭ ವರ್ಷದೊಳಗಿನ ಮತ್ತು ೧೭ ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರಲಿದ್ದು, ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಟೈಕೋಥಾನ್ ಸ್ಪರ್ಧೆಗೆ ಸಾಮಾನ್ಯವಾಗಿ ಮನೆಗಳಲ್ಲಿ ದೊರೆಯುವ ನಿರುಪಯುಕ್ತ ವಸ್ತುಗಳಿಂದ ತಯಾರಿಸಲ್ಪಡುವ ಕಲಾಕೃತಿಗಳನ್ನು ತಯಾರಿಸಿ ನ.೨೫ರ ಮಧ್ಯಾಹ್ನ ೧೨ರೊಳಗೆ ಪಾಲಿಕೆಯ ಇಂದಿರಾ ಸ್ಮಾರಕ ಭವನಕ್ಕೆ ತಂದು ನೀಡುವುದು. ವಿಜೇತರಿಗೆ ಪ್ರತ್ಯೇಕ ವಿಭಾಗದಲ್ಲಿ ಪ್ರಥಮ ೧೫,೦೦೦ ರೂ., ದ್ವಿತೀಯ ೧೦,೦೦೦ ರೂ. ಹಾಗೂ ತೃತೀಯ ೫,೦೦೦ ರೂ. ನಗದು ನೀಡಲಾಗುತ್ತದೆ. ಚಿತ್ರಕಲಾ ಸ್ಪರ್ಧೆಯು ನ.೨೫ರಂದು ಬೆಳಗ್ಗೆ ೧೦ಕ್ಕೆ ಇಂದಿರಾ ಸ್ಮಾರಕ ಭವನದ ಆವರಣದಲ್ಲಿ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗದಲ್ಲಿ ಪ್ರಥಮ ೧೦,೦೦೦ ರೂ., ದ್ವಿತೀಯ ೫,೦೦೦ ರೂ. ಹಾಗೂ ತೃತೀಯ ಬಹುಮಾನ ೩,೦೦೦ ರೂ. ನಗದು ರೂಪದಲ್ಲಿ ನೀಡಲಾಗುವುದು. ಎರಡು ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.