ಚಿತ್ರಕಲಾ ಪ್ರದರ್ಶನ ಇಂದಿನಿಂದ

DSC_8036
Published on

ವಿಜಯವಾಣಿ ಸುದ್ದಿಜಾಲಧಾರವಾಡ
ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅಮೃತ ಮಹೋತ್ಸವ ಸಂಭ್ರಮ ನಿಮಿತ್ತ ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಇಲ್ಲಿನ ಆರ್ಟ್ ಗ್ಯಾಲರಿಯಲ್ಲಿ ಆ. 17, 18ರಂದು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಗ್ರಂಥಗಳ ಲೋಕಾರ್ಪಣೆ, ಪ್ರಶಸ್ತಿ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಸಿ. ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್. ಶಿವಲಿಂಗಪ್ಪ ಕಲಾವಿದ, ಶಿಲ್ಪಿ, ಲೇಖಕ ಹಾಗೂ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಶಿವಲಿಂಗಪ್ಪ ಅವರು ಬಸವಣ್ಣನವರ ಸಚಿತ್ರ ಕಥೆ (ಆಂಗ್ಲ ಭಾಷೆ), ಸತ್ಯದರ್ಶನ, ಬಸವಣ್ಣನವರ ಸಚಿತ್ರ ಕಥೆ (ಮರಾಠಿ), ಶರಣ ಸಾಹಿತ್ಯದಲ್ಲಿ ವಿಜ್ಞಾನ ಮತ್ತು ಸುಜ್ಞಾನ, ಶಿಲ್ಪಿಯೇ ರಾಜಗುರುವಾಗಿ ಎಂಬ ಕೃತಿಗಳನ್ನು ಬರೆದಿದ್ದಾರೆ. ಈ ಕೃತಿಗಳನ್ನು ಆ. 17ರಂದು ಬೆಳಗ್ಗೆ 10.30ಕ್ಕೆ ಬಿಡುಗಡೆ ಮಾಡಲಾಗುವುದು. ಉಪ್ಪನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಲಾವಿದ ಎಂ.ಆರ್. ಬಾಳಿಕಾಯಿ ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಡಿ.ಬಿ. ನಾಯಕ, ಚಂದ್ರಕಾಂತ ಬೆಲ್ಲದ ಆಗಮಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಲ್. ಶಿವಲಿಂಗಪ್ಪ ಅವರಿಗೆ ಅಮೃತ ಕಲಾರತ್ನ ಪ್ರಶಸ್ತಿ ಹಾಗೂ ಚಿತ್ರಕಲಾ ಪ್ರಾಧ್ಯಾಪಕ ಡಾ. ಬಸವರಾಜ ಗವಿಮಠರಿಗೆ ಎಲ್. ಶಿವಲಿಂಗಪ್ಪ ಅಮೃತ ಮಹೋತ್ಸವ ಶಿವಕಲಾ ಪ್ರಶಸ್ತಿ ಪುರಸ್ಕಾರ ನೀಡಲಾಗುವುದು. ಆ. 18ರಂದು ಬೆಳಗ್ಗೆ 10 ಗಂಟೆಯಿಂದ ಎಲ್. ಶಿವಲಿಂಗಪ್ಪನವರ ಗ್ರಂಥಗಳ ಕುರಿತು ವಿಚಾರ ಸಂಕಿರಣ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net