

ಚಿತ್ತಾಪುರ: ಮಹಾಪುರುಷರ ಆದರ್ಶಗಳು ಮಾದರಿಯಾಗಬೇಕು. ಶಾಲೆಗಳು ಜಾತಿ, ಮತ, ಪಂತ, ಧರ್ಮಗಳಿಂದ ಮುಕ್ತವಾಗಿರಲಿ ಎಂದು ಪ್ರಾರ್ಥನಾ ಶಾಲೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್ ಹೇಳಿದರು.
ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,
ಶಿಕ್ಷಕರ ವೃತ್ತಿ ಬಹಳ ಪವಿತ್ರವಾದದ್ದು, ಅದರ ಪಾವಿತ್ರ‍್ಯತೆ ಶಿಕ್ಷಕರು ತಿಳಿದುಕೊಂಡು ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕಬೇಕು. ಶಿಕ್ಷಕರು ದೇಶವನ್ನು ಕಟ್ಟುವ ಶಿಲ್ಪಿಗಳು ಇದ್ದಂತೆ. ಅದನ್ನು ಅರಿತುಕೊಂಡು ತಮ್ಮ ಸೇವೆಯನ್ನು ಸಲ್ಲಿಸಬೇಕೆಂದರು.
ಶ್ರೀಕೃಷ್ಣ ಧರ್ಮದ ಹಾದಿಯನ್ನು ಬೋಧನೆ ಮಾಡಿದ ಮಹಾಪುರುಷ. ನ್ಯಾಯ, ಸತ್ಯ, ಪ್ರಾಮಾಣಿಕತೆ ಇಡೀ ಜಗತ್ತಿಗೆ ತೋರಿಸಿದ ಮಹಾಚೇತನರಾಗಿದ್ದರು. ಸತ್ಯದ ಹಾದಿಯಲ್ಲಿ ಸಾಗುವರಿಗೆ ಜಯ ಲಭಿಸುತ್ತದೆ. ಇಂತಹ ಒಳ್ಳೆಯ ಮಹಾಪುರುಷರ ಆದರ್ಶ ತತ್ವಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕೆಂದು ಹೇಳಿದರು.
ವಿದ್ಯಾರ್ಥಿಗಳಾದ ಭಾಗ್ಯಲಕ್ಷ್ಮಿ, ಮಾರುತಿ, ಶಶಿಧರ, ಆಫೀಯಾ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು. ಶಾಲೆಯಲ್ಲಿ ಪುಟ್ಟ-ಪುಟ್ಟ ಮಕ್ಕಳು ಕೃಷ್ಣ ರಾಧೆಯ ವೇಷಭೂಷಣದಲ್ಲಿ ಮಿಂಚಿದರು. ಚಿಣ್ಣರ ಚಿಲಿಪಿಲಿ ಕೃಷ್ಣ ರಾಧೆಯ ವಿವಿಧ ಭಂಗಿಗಳು ಗಮನ ಸೆಳೆದವು. ಕೆಲವು ಮಕ್ಕಳಲ್ಲಿ ಅವರ ನೆಚ್ಚಿನ ಶಿಕ್ಷಕರ ಭಂಗಿಯಲ್ಲಿ ವಿಶೇಷವಾಗಿ ಸಿದ್ಧರಾಗಿ ತಮ್ಮ ಶಿಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸಿದರು. ಶಾಲೆಯ ಆವರಣದಲ್ಲಿ ವಿರಮಿಡ್ ಆಕಾರದಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ನಿಂತು ಮೊಸರು ಮಡಿಕೆ ಒಡೆದು ಸಂಭ್ರಮಿಸಿದರು.
ಶಿಕ್ಷಕಿಯರಾದ ಭಾಗ್ಯಜ್ಯೋತಿ ವಿಶ್ವಕರ್ಮ, ರೋಸ್ ಮೇರಿ, ಶಮೀಮ್, ಪ್ರೀತಿ, ಸುಶೀಲಾ ರಾಠೋಡ, ತೇಜಸ್ವಿನಿ ಗೊಂಬಿಮಠ, ಹೇಮಾ ಕುಲಕರ್ಣಿ, ಶ್ರೀದೇವಿ ಇದ್ದರು. ಮಧುಶ್ರೀ ಪ್ರಾರ್ಥನಾ ಗೀತೆ ಹಾಡಿದರು. ಪೌರ್ಣಮಿ ಗುತ್ತೇದಾರ ನಿರೂಪಣೆ ಮಾಡಿದರು.