

ಚಿತ್ತಾಪುರ: ಕಲಗುರ್ತಿಯಲ್ಲಿ ಕೋಲಿ ಸಮಾಜದ ರಾಮಚಂದ್ರಪ್ಪ ಕೊರಬಾ ಅವರ ಸಾವಿಗೆ ಕಾರಣರಾದವರನ್ನು ಕೂಡಲೆ ಬಂಧಿಸಬೇಕು. ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ಸೇರಿ ಇತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಕೋಲಿ ಸಮಾಜ ಯುವ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಕೊರಬಾ ಸಾವಿಗೆ ಕಾರಣರಾದವರ ವಿರುದ್ಧ ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಿಸಿದರೂ ಇಲ್ಲಿವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರು ಹಾಗೂ ಕಲಗುರ್ತಿಯ 4-5 ಮುಖಂಡರ ಕಿರುಕುಳದಿಂದಲೇ ದೇವಾನಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವಾನಂದ ಹಾಗೂ ಸಾಕ್ಷಿದಾರರ ಕುಟುಂಬದವರಿಗೆ ರಕ್ಷಣೆ ನೀಡಬೇಕು. ಪ್ರಕರಣದ ತನಿಖೆ ಪಾರದರ್ಶಕತೆಯಿಂದ ನಡೆಯಬೇಕೆಂದು ಎಂದು ಒತ್ತಾಯಿಸಿದರು.
ಲಾಡ್ಡಿಂಗ್ ಕ್ರಾಸ್‌ನಿಂದ ಆರಂಭವಾದ ಪ್ರತಿಭಟನೆ ತಹಸಿಲ್ ಕಚೇರಿವರೆಗೂ ಸಾಗಿತು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಹೆಚ್ಚುವರಿ ಎಸ್ಪಿ ಶ್ರೀನಿಧಿ ಹಾಗೂ ಕಂದಾಯ ಇಲಾಖೆ ಶಿರಸ್ತೇದಾರ ಲಕ್ಷ್ಮೀನಾರಾಯಣ ಅವರಿಗೆ ಸಲ್ಲಿಸಿದರು.
ಯುವ ಘಟಕದ ತಾಲೂಕು ಅಧ್ಯಕ್ಷ ಗುಂಡು ಐನಾಪುರ, ಪ್ರಮುಖರಾದ ಶರಣಪ್ಪ ತಳವಾರ, ರಾಮಲಿಂಗ ಬಾನರ, ಮಲ್ಲಿಕಾರ್ಜುನ ಎಮ್ಮೆನೊರ, ಬಸವರಾಜ ಸಪ್ಪನಗೋಳ, ಸಂತೋಷ ಬೆಣ್ಣೂರ, ಬಸವರಾಜ ಚಿನಮಳ್ಳಿ, ಸುನೀತಾ ತಳವಾರ, ನಿಂಗಪ್ಪ ದೇವಣಗಾಂವ, ತಮ್ಮಣ್ಣ ಡಿಗ್ಗಿ, ಸೋಮು ಐನಾಪುರ, ರಾಜು ಹೋಳಿಕಟ್ಟಿ ಇತರರಿದ್ದರು. ಡಿವೈಎಸ್‌ಪಿ ಶೀಲವಂತ, ಸಿಪಿಐ ಪ್ರಕಾಶ ಯಾತನೂರ ಬಂದೋಬಸ್ತ್ ಕಲ್ಪಿಸಿದ್ದರು.