ಚಿಣ್ಣರ ಕೈಯಲ್ಲರಳಿದ ಬಣ್ಣದ ಚಿತ್ತಾರ

DDD--0002
Published on

ಚಿತ್ರದುರ್ಗ: ಅಲ್ಲಿ ಚಿಣ್ಣರ ಕಲರವವಿತ್ತು. ಬಣ್ಣಗಳ ಚಿತ್ತಾರ ಬಿಡಿಸಲು ತವಕಿಸುತ್ತಿದ್ದ ಮನಸ್ಸುಗಳಿದ್ದವು. ಪ್ರತಿಯೊಬ್ಬ ಪುಟಾಣಿಯ ಕೈಯಲ್ಲೊಂದು ಕಾರ್ಡ್‌ಬೋರ್ಡ್. ಚೀಲದಲ್ಲಿ ಅಡಗಿ ಕುಳಿತಿದ್ದ ಕಲರ್ ಪೆನ್ಸಿಲ್, ಬಣ್ಣದ ಬಾಟಲಿ, ಬ್ರಷ್. ಕಣ್ಣಿಗೆ ಕಾಣುವ ಪರಿಸರವನ್ನು ಡ್ರಾಯಿಂಗ್‌ಶೀಟ್‌ನ ಚೌಕಟ್ಟಿನಲ್ಲಿ ಕಟ್ಟಿ ಹಾಕುವ ಕೌತುಕ.
ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ, ಅರಣ್ಯಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯ ಒಟ್ಟಾರೆ ಚಿತ್ರಣವಿದು.
ಬೆಳಗ್ಗೆ ಒಂಬತ್ತು ಗಂಟೆಯಿಂದಲೇ ಹೆಸರು ನೋಂದಾಯಿಸಲು ಮಕ್ಕಳು ಶಾಲೆಯ ಕಡೆ ಮುಖ ಮಾಡಿದರು. ಅವರಿಗೆ ಸಾಥ್ ನೀಡಲು ಶಿಕ್ಷಕರೂ ಹಾಜರಾಗಿದ್ದರು. ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ನಿಂತು, ಕೌಂಟರ್‌ಗಳಲ್ಲಿ ಹೆಸರು ನೋಂದಾಯಿಸಿದರು. ಅದೇ ರೀತಿ ಸ್ಪರ್ಧೆ ನಡೆಯುವ ಸ್ಥಳಕ್ಕೆ ತೆರಳಿ, ನಿಗದಿತ ಜಾಗೆಗಳಲ್ಲಿ ಕುಳಿತರು.
ಒಂದೊಮ್ಮೆ ಉದ್ಘಾಟನಾ ಸಮಾರಂಭ ಮುಗಿದು, ಕೈಗೆ ಡ್ರಾಯಿಂಗ್ ಶೀಟ್‌ಗಳು ಬಂದಾಗ ಆಡಿಟೋರಿಯಂ ಚಿತ್ರಣವೇ ಬದಲಾಯಿತು. ಬ್ಯಾಗಿನೊಳಗಿದ್ದ ವಸ್ತುಗಳನ್ನು ಎದುರಿಗೆ ಜೋಡಿಸಿಕೊಂಡು ಕುಳಿತರು. ಇನ್ನು ಕೆಲವರು ವೃತ್ತಾಕಾರದಲ್ಲಿ ಕುಳಿತು ಬಣ್ಣಗಳ ಖಜಾನೆಯನ್ನು ಹೊರತೆಗೆದರು.
5,6,7 ನೇ ತರಗತಿಯ ಜೂನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ಪಟ್ಟಣ ಮತ್ತು ಪಾರ್ಕ್ , 8, 9, 10 ನೇ ತರಗತಿಯ ಸೀನಿಯರ್ ವಿಭಾಗದ ಮಕ್ಕಳಿಗೆ ನನ್ನ ಕನಸಿನ ಭೂಮಿ ವಿಷಯಗಳನ್ನು ನಿಗದಿಪಡಿಸಲಾಗಿತ್ತು. ಸ್ಪರ್ಧೆಗೂ ಮುನ್ನ ಮತ್ತೊಮ್ಮೆ ವಿಷಯಗಳನ್ನು ಖಚಿತ ಪಡಿಸಿಕೊಂಡ ಚಿಣ್ಣರು ನಿಧಾನವಾಗಿ ಪೆನ್ಸಿಲ್‌ಗಳಿಂದ ಚಿತ್ರರಚನೆಯಲ್ಲಿ ತೊಡಗಿದರು. ಬೃಹದಾಕಾರದ ಕಟ್ಟಡಗಳು, ರಸ್ತೆ, ಭೂಮಿಯನ್ನು ಸಂಕೇತಿಸುವ ವೃತ್ತ ಹೀಗೆ ಔಟ್‌ಲೈನ್‌ಗಳು ಡ್ರಾಯಿಂಗ್ ಶೀಟಿನಲ್ಲಿ ಅರಳತೊಡಗಿದವು.
ಮುಂದಿನ ಹಂತ ಬಿಡಿಸಿದ ಚಿತ್ರಗಳಿಗೆ ಬಣ್ಣ ತುಂಬುವುದು. ವಾಟರ್ ಕಲರ್, ಮಿಕ್ಸ್ ಮಿಡಿಯಾ, ಸ್ಕೆಚ್ ಪೆನ್, ಪೆನ್ಸಿಲ್, ಕಲರ್ ಪೆನ್ಸಿಲ್, ಪೋಶೋ ಕಲರ್‌ಗಳನ್ನು ಹರಡಿಕೊಂಡು ಕುಳಿತ ದೃಶ್ಯ ಚಿಟ್ಟೆಗಳ ಹಾರಾಟ ನೆನಪಿಸಿತು. ಬಹುಪಾಲು ಚಿತ್ರಗಳಲ್ಲಿ ಹಸಿರು ಬಣ್ಣ ಅಗ್ರಗಣ್ಯ ಸ್ಥಾನ ಗಳಿಸಿತ್ತು. ಕೆಲ ಮಕ್ಕಳು ಭರದ ಭೀಕರತೆ ಸಾರುವ ಕೆಂಪು ಹಾಗೂ ಕಪ್ಪು ಬಣ್ಣಗಳನ್ನು ಸಾಧನವಾಗಿ ಬಳಸಿಕೊಂಡರು.
ಸ್ಪರ್ಧೆಯ ಅವಧಿ ಮುಗಿಯುತ್ತ ಬಂದರೂ ಮಕ್ಕಳಲ್ಲಿನ ಉತ್ಸಾಹ ಕುಗ್ಗಿರಲಿಲ್ಲ. ಉಳಿದ ಅವಧಿಯ ಬಗ್ಗೆ ನೆನಪು ಮಾಡಿಕೊಟ್ಟಾಗಗೆಲ್ಲ, ಇಷ್ಟು ಬೇಗ ಟೈಮ್ ಮುಗಿಯಿತಾ ಮಿಸ್, ಟೈಮ್ ಸಾಕಾಗುತ್ತಿಲ್ಲ ಸರ್ ಎನ್ನುವವರಿಗೇನೂ ಕಡಿಮೆ ಇರಲಿಲ್ಲ.
ಸ್ಪರ್ಧೆ ನಂತರ ಮಕ್ಕಳಿಗೆ ಶುರುವಾಗಿದ್ದು, ಬಹುಮಾನ ಯಾವಾಗ ಕೊಡುತ್ತಾರೆ ಎಂಬ ಪ್ರಶ್ನೆ. ಶಿಕ್ಷಕರಿಂದ ಸಮಾಧಾನಕರ ಉತ್ತರ ಪಡೆದು ಮತ್ತೆ ಬ್ಯಾಗ್ ಹೆಗಲಿಗೆ ಏರಿಸಿದ ಮಕ್ಕಳ ಮುಖದ ಮೇಲೆ ಏನನ್ನೋ ಗೆದ್ದ ಸಂಭ್ರಮವಿತ್ತು.

ಶೀಘ್ರವೇ ಫಲಿತಾಂಶ
ಸ್ಪರ್ಧೆಯ ಫಲಿತಾಂಶವನ್ನು ಶೀಘ್ರವೇ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಬಹುಮಾನ ವಿತರಣೆಯ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಎರಡೂ ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ನಗದು ಬಹುಮಾನವಿದೆ. ಪ್ರಥಮ 2 ಸಾವಿರ ರೂ., ದ್ವಿತೀಯ 1.5 ಸಾವಿರ ರೂ., ತೃತೀಯ 1 ಸಾವಿರ ರೂ., ಹಾಗೂ ತಲಾ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.

ಬ್ರಹ್ಮಾಂಡದಲ್ಲಿ ಭೂಮಿಯಂಥ ಗ್ರಹ ಮತ್ತೊಂದಿಲ್ಲ
ಸೌರಮಂಡಲದ ಗ್ರಹಗಳ ಪೈಕಿ ಜೀವ ವೈವಿಧ್ಯ ಬದುಕಲು ಪೂರಕ ವಾತಾವರಣವಿರುವ ಏಕೈಕ ಗ್ರಹವೆಂದರೆ ಭೂಮಿ ಮಾತ್ರ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಸುವ ಕೆಲಸ ಮಾಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ.
ಜಿಲ್ಲಾಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿದ ನಂತರ ಮಾತನಾಡಿದ ಅವರು ಭೂಮಿ ಹೊರತುಪಡಿಸಿದರೆ ಮನುಷ್ಯ, ಪ್ರಾಣಿ, ಸಸ್ಯಗಳು ಸೇರಿ ಸಮಗ್ರ ಜೀವ ಸಂಕುಲದ ಬೆಳವಣಿಗೆಗೆ ಅಗತ್ಯವಿರುವ ವಾತಾವರಣ ಬ್ರಹ್ಮಾಂಡದಲ್ಲೇ ಇಲ್ಲ ಎಂದು ವಿವರಿಸಿದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕಿಳಿದು, ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣು, ನೀರು, ಶಬ್ದ, ಗಾಳಿ ಮಾಲಿನ್ಯ, ಕಾಡು ನಾಶ ತಡೆಗಟ್ಟಬೇಕಿದೆ ಎನ್ನುವ ಮೂಲಕ ಪರಿಸರದ ಜಾಗೃತಿ ಮೂಡಿಸಲು ಯತ್ನಿಸಿದ್ದು ವಿಶೇಷ.

ಅಭಿವೃದ್ಧಿ ಹೆಸರಲ್ಲಿ ಕಾಡು, ಕೃಷಿ ಭೂಮಿ ನಾಶ
ನಗರೀಕರಣ, ಕೈಗಾರಿಕೆ ಇತ್ಯಾದಿ ಅಭಿವೃದ್ಧಿ ಹೆಸರಲ್ಲಿ ಕಾಡು, ಕೃಷಿ ಭೂಮಿ ನಾಶವಾಗುತ್ತಿದೆ ಎಂಬ ಆತಂಕ ಹೊರ ಹಾಕಿದವರು ಎಡಿಸಿ ಬಿ.ಟಿ. ಕುಮಾರಸ್ವಾಮಿ.
ಮನೆಗೊಂದು ಕೈ ತೋಟ, ಊರಿಗೊಂದು ಉದ್ಯಾನ ಇರಬೇಕು. ಪ್ರತಿಯೊಬ್ಬರೂ ಸಸಿ ನೆಡುವುದರೊಂದಿಗೆ ಅವುಗಳನ್ನು ಪೋಷಿಸಬೇಕು. ಉತ್ತಮ ಪರಿಸರ ಇದ್ದ ಕಾರಣಕ್ಕೆ ನಮ್ಮ ಪೂರ್ವಿಕರು ದೀರ್ಘಾಯುಷಿಗಳಾಗಿದ್ದರು ಎಂಬ ಅಂಶವನ್ನು ಮಕ್ಕಳೆದುರು ತೆರೆದಿಟ್ಟರು. ನಾವು ಈಗಿನಿಂದಲೇ ಹಸಿರು ಉಳಿಸಿಕೊಳ್ಳದೇ ಹೋದರೆ ಮುಂದಿನ ದಿನಗಳು ಹೇಗಿರುತ್ತವೆ ಎಂಬುದನ್ನು ಊಹಿಸಲೂ ಸಾಧ್ಯವಾಗದು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಾಪಿಟ್ಟು ಕೊಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಕಿವಿಮಾತು ಹೇಳಲು ಮರೆಯಲಿಲ್ಲ.

ಪರಿಸರ ನಾಶದಿಂದ ಹವಾಮಾನ ವೈಪರೀತ್ಯ
ಅಕಾಲಿಕ ಮಳೆ, ಹೆಚ್ಚುತ್ತಿರುವ ತಾಪದಿಂದ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ಮಾತಿಗಿಳಿದ ಡಿಸಿಎಫ್ ಟಿ. ರಾಜಣ್ಣ ಮಕ್ಕಳಲ್ಲಿ ಪರಿಸರ ಪ್ರೇಮದ ಬೀಜ ಬಿತ್ತಿದರು.
ಇಂದಿನ ಹವಾಮಾನ ವೈಪರೀತ್ಯಕ್ಕೆ ಪರಿಸರ ನಾಶ ಯಾವ ರೀತಿಯಾಗಿ ಕಾರಣವಾಗುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಕಾಡು ನಾಶ ನಿಯಂತ್ರಿಸಿ, ಹಸಿರೀಕರಣಕ್ಕೆ ಒತ್ತುಕೊಡಬೇಕಿದೆ. ಇರುವುದೊಂದೇ ಭೂಮಿ. ಅದನ್ನು ಕಾಪಾಡಿಕೊಳ್ಳದಿದ್ದರೆ ಇಡೀ ಜೀವ ಸಂಕುಲ ಅಳಿವಿನಂಚಿಗೆ ಬಂದು ನಿಲ್ಲಬಹುದು ಎಂಬ ಆತಂಕ ಅವರ ಧ್ವನಿಯಲ್ಲಿತ್ತು.
ಪರಿಸರ ನಾಶದ ಅನಾಹುತಗಳನ್ನರಿತು, ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಪ್ರತಿವರ್ಷ ಜೂ.5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ ಎಂಬುದನ್ನು ನೆನಪಿಸಿದರು.

ಮನೆ, ಶಾಲೆಯಿಂದಲೇ ಆರಂಭವಾಗಲಿ
ಪರಿಸರ ಪ್ರಜ್ಞೆ ಮನೆ, ಶಾಲೆಯಿಂದಲೇ ಆರಂಭವಾಗಬೇಕು ಎಂದು ಪಾಠ ಹೇಳಿದವರು ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್.
ಸಣ್ಣ ಸಣ್ಣ ಕೆಲಸಗಳೂ ಪರಿಸರದ ಉಳಿವಿಗೆ ಕೊಡುಗೆ ನೀಡಬಲ್ಲವು. ಕಾಲಕಾಲಕ್ಕೆ ದೊರೆಯುವ ಹಣ್ಣಿನ ಬೀಜಗಳನ್ನು ವ್ಯರ್ಥ ಮಾಡದೆ ಮಣ್ಣಿನಲ್ಲಿ ಹಾಕಿದರೆ ಕನಿಷ್ಠ 10 ಮರಗಳನ್ನು ಬೆಳೆಸಬಹುದು ಎಂಬುದು ಇದಕ್ಕೆ ಉದಾಹರಣೆ. ಅದೇ ರೀತಿ ಏಕ ಬಳಕೆ ಪ್ಲಾಸ್ಟಿಕ್‌ನಿಂದ ದೂರವಿದ್ದು ಮರು ಬಳಕೆ ವಸ್ತುಗಳಿಗೆ ಆದ್ಯತೆ ಇಂತಹ ಅಂಶಗಳನ್ನು ಜೀವನದಲ್ಲಿ ನಿತ್ಯವೂ ಪಾಲಿಸಬೇಖು ಎಂದು ಕಿವಿ ಮಾತು ಹೇಳಿದರು.

ಸಸಿ ನೆಟ್ಟ ಗಣ್ಯರು
ವಿಶ್ವ ಪರಿಸರ ದಿನದ ಅಂಗವಾಗಿ ವಿಜಯವಾಣಿ, ಅರಣ್ಯ ಇಲಾಖೆ ಹಾಗೂ ವಿದ್ಯಾವಿಕಾಸ ವಿದ್ಯಾಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಸಂಸ್ಥೆ ಆವರಣದಲ್ಲಿ ಸಸಿನೆಟ್ಟರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆ ನಿರ್ದೇಶಕ ಎಸ್.ಎಂ.ಪೃಥ್ವೀಶ್, ಪ್ರಾಚಾರ್ಯ ಬಸವರಾಜಯ್ಯ, ಮುಖ್ಯಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ, ಚಿತ್ರ ಕಲಾವಿದ ಕ್ರಿಯೇಟಿವ್ ಟಿ.ಎಂ. ವೀರೇಶ್, ವಿಜಯವಾಣಿ ಆವೃತ್ತಿ ಮುಖ್ಯಸ್ಥ ನವೀನ್ ಎಂ.ಬಿ., ಮುಖ್ಯಉಪ ಸಂಪಾದಕ ಹರ್ಷ ಪುರೋಹಿತ, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ, ವಿಶೇಷ ವರದಿಗಾರ ಡಿ.ಪಿ. ನಾಗರಾಜ ಶ್ರೇಷ್ಠಿ, ವರದಿಗಾರ ಕೆ.ಎಸ್.ಪ್ರಣವ್‌ಕುಮಾರ್, ಡಿಆರ್‌ಎಫ್‌ಒ ಪ್ರದೀಪ್, ವಿದ್ಯಾವಿಕಾಸ ವಿದ್ಯಾಸಂಸ್ಥೆ ಬೋಧಕರು, ಬೋಧಕೇತರ ಸಿಬ್ಬಂದಿ, ನಗರ ಮತ್ತು ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.
ವಿದ್ಯಾರ್ಥಿನಿಯರಾದ ಸನಿಹಸಿಂಚನಾ ಸ್ವಾಗತಿಸಿ, ವಿ. ಜಾನವಿ ವಂದಿಸಿದರು. ಸೃಷ್ಟಿ ವರದಿ ವಾಚಿಸಿದರು. ತೃಷಾ, ದಿಶಾ, ಸಾನ್ವಿ ಪ್ರಾರ್ಥಿಸಿದರು.
5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 400 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net