ಚಿಟ್ಟೆ ಉದ್ಯಾನ, ಆರ್ಕಿಡೇರಿಯಂ ವೀಕ್ಷಣೆಗೆ ಶೀಘ್ರ ಮುಕ್ತ

bnk tejas
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ವ್ಯಂಗ್ಯಚಿತ್ರ, ಹಕ್ಕಿ, ಕೀಟ ಚಿತ್ರಕಲೆ, ಕನ್ನಡ ಹಸ್ತಾಕ್ಷರ ಕಾರ್ಯಾಗಾರದಲ್ಲಿ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ. ಸಿ.ರಮೇಶ್ ಮಾತನಾಡಿದರು.
Published on

ಬಣಕಲ್: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಿರ್ಮಾಣ ಹಂತದಲ್ಲಿರುವ ಚಿಟ್ಟೆ ಉದ್ಯಾನ ಮತ್ತು ಆರ್ಕಿಡೇರಿಯಂ ಶೀಘ್ರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ. ಸಿ.ರಮೇಶ್ ಹೇಳಿದರು.

ತೇಜಸ್ವಿ ಜನ್ಮದಿನದ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ವ್ಯಂಗ್ಯಚಿತ್ರ, ಹಕ್ಕಿ, ಕೀಟ ಚಿತ್ರಕಲೆ, ಕನ್ನಡ ಹಸ್ತಾಕ್ಷರ ಕಾರ್ಯಾಗಾರದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳನ್ನು ನೆಡುವ ಮೂಲಕ ಚಿಟ್ಟೆಗಳ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆ, ಅದಕ್ಕೆ ಸಂಬಂಧಿಸಿದ ಸಸ್ಯಗಳ ಮಾಹಿತಿ ಲಕಗಳು ಇರಲಿವೆ. ಆರ್ಕಿಡೇರಿಯಂನಲ್ಲಿ ಪಶ್ಚಿಮಘಟ್ಟಗಳಲ್ಲಿ ಕಾಣ ಸಿಗುವ ಆರ್ಕಿಡ್ ಸಸ್ಯಗಳನ್ನು ಇಡಲಾಗಿದ್ದು, ಅವುಗಳ ಮಾಹಿತಿ ಮತ್ತು ಚಿತ್ರಗಳು ಇರಲಿವೆ. ಜೀವ ವ್ಯವಸ್ಥೆಯಲ್ಲಿ ಆರ್ಕಿಡ್‌ಗಳ ಮಹತ್ವ ಮತ್ತು ಸಂರಕ್ಷಣೆಯ ಜಾಗೃತಿಯನ್ನು ವೀಕ್ಷಕರಿಗೆ ಮೂಡಿಸಲಿದೆ. ವಸತಿಗೃಹ ಮತ್ತು ನಾಟಕ, ಸಿನಿಮಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಪೂರಕವಾದ ಧ್ವನಿ-ಬೆಳಕಿನ ತಾಂತ್ರಿಕ ಸವಲತ್ತುಗಳಿರುವ ಕಿರು ರಂಗ ಮಂದಿರ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ತೇಜಸ್ವಿ ಪ್ರತಿಷ್ಠಾನ ಜ್ಞಾನದಾಹಿಗಳಿಗೆ ಸೂಕ್ತ ತಾಣ ಎಂದರು.

ವ್ಯಂಗ್ಯಚಿತ್ರಕಾರ ಗುಜ್ಜಾರಪ್ಪ ಮಾತನಾಡಿ, ವ್ಯಂಗ್ಯಚಿತ್ರ ರಚನೆ ಕಲಿಯಲು ನಿರಂತರ ಅಭ್ಯಾಸ ಬೇಕಾಗುತ್ತದೆ. ವ್ಯಂಗ್ಯಚಿತ್ರ ರಚನಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ಶಿಬಿರಾರ್ಥಿಗಳು ಅವಕಾಶ ಬಳಸಿಕೊಳ್ಳಬೇಕು ಎಂದರು.

ಗುಜ್ಜಾರಪ್ಪ ಅವರು ಡಿಜಿಟಲ್ ವ್ಯಂಗ್ಯಚಿತ್ರ, ರಾ.ಸೂರಿ ಅವರು ಹಸ್ತ ವ್ಯಂಗ್ಯಚಿತ್ರ, ಜಿ.ಎಸ್. ನಾಗನಾಥ್ ಅವರು ಕಾರ್ಟೂನ್ ಪಾತ್ರ ನಿರ್ಮಾಣದ ಮಾಹಿತಿ ನೀಡಿದರು. ಶಿಬಿರಾರ್ಥಿಗಳು ವ್ಯಂಗ್ಯಚಿತ್ರ ರಚನೆಯ ವಿವಿಧ ಹಂತಗಳನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು. ವಿವಿಧ ಪತ್ರಿಕಾ ತುಣುಕುಗಳ ಸಂಗ್ರಹಕಾರ ಅಜ್ಜಂಪುರ ಕೃಷ್ಣಮೂರ್ತಿ ಅವರ ಸಂಗ್ರಹದ ತೇಜಸ್ವಿ ಅವರ ಕುರಿತು ಪ್ರಕಟಗೊಂಡ ವರದಿ, ಬರಹಗಳ ತುಣುಕುಗಳನ್ನು ಪ್ರದರ್ಶಿಸಲಾಯಿತು. ಲೇಖಕರಾದ ನರಸಿಂಹಮೂರ್ತಿ ಹಳೇಹಟ್ಟಿ ಹಾಗೂ ಕಿಶೋರ್ ಚಿಂತಾಮಣಿ ಸಂಪಾದಕತ್ವದ ಕನ್ನಡದ ತೇಜಸ್ಸು ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜೀವನಚಿತ್ರ ಮತ್ತು ಸಾಹಿತ್ಯಚಿಂತನೆಯ ಕೃತಿ ಬಿಡುಗಡೆ ಮಾಡಲಾಯಿತು.

ಜಿ.ಎಸ್.ನಾಗನಾಥ್, ರಕ್ಷಾ ಪೂಜಾರಿ, ದಿನೇಶ್ ಹೊಳ್ಳ, ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಕೊಟ್ಟಿಗೆಹಾರ, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನವದೀಪ್, ಕೀಟತಜ್ಞ ಡಾ. ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ಕಸಾಪ ನಿಕಟಪೂರ್ವ ಅಧ್ಯಕ್ಷ ಶಾಂತಕುಮಾರ್, ಕಲಾವಿದರಾದ ವಿಶ್ವಕರ್ಮ ಆಚಾರ್ಯ, ಹರ್ಷಕಾವಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net