

ಪಾಂಡವಪುರ: ತಾಲೂಕಿನ ಚಿಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವ ಪ್ರಭಾರ ಕಾರ್ಯದರ್ಶಿ ಕುಮಾರ್ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಆಡಳಿತ ಮಂಡಳಿ ನಿರ್ದೇಶಕರು ಸಂಘದ ಕಚೇರಿ ಮುಂಭಾಗ ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಮೂಲಕ ಗುರುವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸಭೆ ಬಳಿಕ ಸಂಘದ ಅಧ್ಯಕ್ಷ ಕೆ.ಕುಮಾರ ಮಾತನಾಡಿ, ಸಂಘದ ಹಣಕಾಸು ಅವ್ಯವಹಾರದ ಜತೆಗೆ ಕೆಲಸಕ್ಕೆ ಸೇರುವಾಗ ಭದ್ರತೆಗಾಗಿ ಕರಾರು ಮಾಡಿಸಿದ್ದ ಒಂದು ಎಕರೆ ಜಮೀನನ್ನು ಆಡಳಿತ ಮಂಡಳಿ ಗಮನಕ್ಕೆ ಬಾರದಂತೆ ವಜಾ ಮಾಡಿಸಿದ್ದಾರೆ. ಪಾಂಡವಪುರ ಪಟ್ಟಣದಲ್ಲಿ ವಾಸವಿರುವ ಅವರು ವಾರಕ್ಕೊಮ್ಮೆ ಮಾತ್ರ ಕಚೇರಿ ಬಾಗಿಲು ತೆರಯುತ್ತಾರೆ. ಇದರಿಂದ ಸಂಘದ ಬೆಳವಣಿಗೆ ಕುಂಠಿತವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ದಾಖಲೆ ಸಮೇತ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ನೀಡಿದ ಪರಿಣಾಮ ಮತ್ತೊಬ್ಬರನ್ನು ಪ್ರಭಾರ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅವರ ಆದೇಶಕ್ಕೂ ಬೆಲೆ ನೀಡದ ಕುಮಾರ್ ಅವರು ಉದ್ಧಟತನದಿಂದ ವರ್ತಿಸುತ್ತಿದ್ದು, ಮತ್ತೊಬ್ಬರಿಗೆ ಚಾರ್ಜ್ ನೀಡಬೇಕಿರುವ ಕಾರಣ ಗುರುವಾರ ಸಹ ಕಚೇರಿ ಬಾಗಿಲು ತೆರೆದಿಲ್ಲ. ಹೀಗಾಗಿ ಬಾಗಿಲಲ್ಲೇ ಕುಳಿತು ಅವರ ವಿರುದ್ಧ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದರು.
ಮಾರುಕಟ್ಟೆ ಗುಮಾಸ್ತರಾಗಿ ನೇಮಕಗೊಂಡಿರುವ ಇವರು ಕಾರ್ಯದರ್ಶಿ ಹುದ್ದೆ ನಿಭಾಯಿಸುವಷ್ಟು ವಿದ್ಯಾರ್ಹತೆ ಹೊಂದಿಲ್ಲ. ಈ ಹಿಂದಿನ ಅಧ್ಯಕ್ಷರ ಸಹಿ ಇದ್ದ ಚೆಕ್ ಬಳಸಿಕೊಂಡು 1.30 ಲಕ್ಷ ರೂ.ಗಳನ್ನು ಬ್ಯಾಂಕಿನಿಂದ ಡ್ರಾ ಮಾಡಿದ್ದಾರೆ. ಬಹಳಷ್ಟು ತಿಂಗಳುಗಳ ಕಾಲ ಸಭಾ ನಡಾವಳಿ ಪುಸ್ತಕವನ್ನು ಬಚ್ಚಿಟ್ಟು, ನಾಲ್ಕು ಸಾವಿರ ರೂ. ಸಂಬಳವನ್ನು ಏರಿಕೆ ಮಾಡಿರುವಂತೆ ಸಭಾ ನಡಾವಳಿಯ ಪುಸ್ತಕವನ್ನು ತಿದ್ದಿ ಅಕ್ರಮವಾಗಿ ಹೆಚ್ಚುವರಿ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಉತ್ತರಿಸಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಇವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಹಾಯಕ ನಿಬಂಧಕರಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ನಿಂಗರಾಜು, ದೇವರಾಜ, ದಿವ್ಯಾ, ನಾಗರಾಜು, ಜಯಶೀಲಾ, ಸಿದ್ದಯ್ಯ, ಬೋರೇಗೌಡ, ಮೇಲ್ವಿಚಾರಕ ಚಂದ್ರಶೇಖರ್ ಇತರರು ಇದ್ದರು.