

ಹುಬ್ಬಳ್ಳಿ: ದಕ್ಷಿಣ ಭಾರತದಲ್ಲಿ ಅನುಷ್ಠಾನಗೊಂಡ ಮೊದಲ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್ಟಿಎಸ್) ಯೋಜನೆ ಉದ್ಘಾಟನೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ ಯೋಜನೆ ಲೋಕಾರ್ಪಣೆಗೊಳಿಸಿ ಚಿಗರಿ ಬಸ್ನಲ್ಲಿ ಸಂಚರಿಸಲಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಧ್ಯೆ ಪ್ರತ್ಯೇಕ ಬಸ್ ಕಾರಿಡಾರ್ ಸೇರಿ 22.5 ಕಿ.ಮೀ. ಉದ್ದದ ಅಷ್ಟಪಥ ರಸ್ತೆ ನಿರ್ವಿುಸಲಾಗಿದೆ. ಧಾರವಾಡದ ಗಾಂಧಿ ನಗರದಿಂದ ಹುಬ್ಬಳ್ಳಿಯ ಉಣಕಲ್ಲ ಶ್ರೀನಗರ ಕ್ರಾಸ್ವರೆಗೂ ನಾಲ್ಕು ಪಥದ ಪ್ರತ್ಯೇಕ ಬಿಆರ್ಟಿ ಕಾರಿಡಾರ್ ಇದ್ದು, ಅದರ ಎರಡೂ ಬದಿಯಲ್ಲಿ ಇತರೆ (ಮಿಶ್ರ) ವಾಹನಗಳಿಗಾಗಿ ದ್ವಿಪಥ ರಚನೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಫುಟ್ಪಾತ್ ಸಹ ನಿರ್ವಣವಾಗಿದೆ.
ಹುಬ್ಬಳ್ಳಿ-ಧಾರವಾಡ ಮಧ್ಯೆ ಪ್ರಯಾಣಿಸುವವರಿಗೆ ಶೀಘ್ರ, ಸುರಕ್ಷಿತ, ಸುಖಕರ ಮತ್ತು ಕೈಗೆಟುಕುವ ದರದಲ್ಲಿ ವಿಶ್ವ ದರ್ಜೆಯ ತ್ವರಿತ ಬಸ್ ಸಾರಿಗೆ ಸೌಲಭ್ಯ ಕಲ್ಪಿಸುವ ಜೊತೆಗೆ ಉತ್ತಮ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶ ದೊಂದಿಗೆ 2012ಮೇ ತಿಂಗಳಲ್ಲಿ್ಲ ಬಿಆರ್ಟಿಎಸ್ ಕಂಪನಿ ಸ್ಥಾಪಿಸಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಲವು ಏಳು ಬೀಳುಗಳನ್ನು ಕಂಡು ಯೋಜನೆ ಜಾರಿಯಲ್ಲಿ ಸಾಕಷ್ಟು ವಿಳಂಬವಾಗಿ ಸಾರ್ವಜನಿಕರ ಆಕ್ರೋಶಗಳನ್ನೂ ಎದುರಿಸಿ ಈಗ ಯೋಜನೆ ಜನಸೇವೆ ಆರಂಭಿಸಿದೆ.
2015ರೊಳಗೆ ಯೋಜನೆ ಪೂರ್ತಿಗೊಳಿಸುವ ಕಾಲಮಿತಿ ಯೊಂದಿಗೆ 592 ಕೋಟಿ ರೂ. ಯೋಜನಾ ವೆಚ್ಚ ನಿಗದಿಪಡಿಸಲಾಗಿತ್ತು. ಆದರೆ, ನಾನಾ ಕಾರಣಗಳಿಗೆ ಯೋಜನೆ ವಿಳಂಬವಾಗಿ ಈಗ 2020ರವರೆಗೆ ಕಾಮಗಾರಿಗಳು ನಡೆದು ಯೋಜನಾ ವೆಚ್ಚ 970 ಕೋಟಿ ರೂ.ವರೆಗೆ ತಲುಪಿದೆ. ವಿಶೇಷವೆಂದರೆ ಭೂಸ್ವಾಧೀನ ಪರಿಹಾರಕ್ಕಾಗಿಯೇ 356 ಕೋಟಿ ರೂ. ನೀಡಲಾಗಿದೆ.
ಆದರೂ ಕೆಲ ಕಾಮಗಾರಿ ಪೂರ್ತಿಯಾಗಿಲ್ಲ, ಅವೈಜ್ಞಾನಿಕತೆ ಕೆಲವೆಡೆ ಜನರಿಗೆ ಸಮಸ್ಯೆ ಉಂಟುಮಾಡುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಮುಖ್ಯವಾಗಿ ಬಸ್ ನಿಲ್ದಾಣಗಳಿಗೆ ಸುಲಭವಾಗಿ ತಲುಪುವ ವ್ಯವಸ್ಥೆ ಇಲ್ಲ. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಎದುರು ಜನರು ರಸ್ತೆ ದಾಟಲು ಹರಸಾಹಸ ಮಾಡಬೇಕಾಗಿದೆ. ಅಲ್ಲೊಂದು ಅಂಡರ್ಪಾಸ್ ಮಾಡುವುದು ಅಗತ್ಯವಾಗಿದೆ. ಸಾರ್ವಜನಿಕರ ಬೇಕು ಬೇಡಿಕೆಗಳ ಬಗ್ಗೆಯೂ ಬಿಆರ್ಟಿಎಸ್ ಕಂಪನಿ ಒಂದಿಷ್ಟು ಗಮನ ಹರಿಸುವುದು ಒಳಿತು. ಹಾಗೆ ನೋಡಿದರೆ 2018ರ ಅಕ್ಟೋಬರ್ 2ರಿಂದ ಪ್ರಾಯೋಗಿಕ ಸಂಚಾರ ಆರಂಭಿಸಿರುವ ಬಿಆರ್ಟಿಎಸ್ ಚಿಗರಿ ಬಸ್ಗಳು ಪ್ರಯಾಣಿಕರಿಗೆ ಹಿಡಿಸಿವೆ. ಕೆಲ ನ್ಯೂನತೆಗಳ ಮಧ್ಯೆಯೂ ರಾಜ್ಯದ ವಿಶಿಷ್ಟ ಯೋಜನೆ ಬಿಆರ್ಟಿಎಸ್ಅನ್ನು ಜನ ಒಪ್ಪಿಕೊಂಡಿದ್ದಾರೆ. ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿಸಬೇಕಾದರೆ ಪ್ರಯಾಣಿಕರ ಸಮಸ್ಯೆ, ಅಗತ್ಯತೆ ಕೇಳಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹುಬ್ಬಳ್ಳಿ ಹೊಸೂರಲ್ಲಿ ಇಂಟರ್ಚೇಂಜ್, ನಗರ ಸಾರಿಗೆ ಬಸ್ ನಿಲ್ದಾಣ, ವಾಯವ್ಯ ಸಾರಿಗೆ ಬಸ್ ಡಿಪೋಗಳನ್ನು ನಿರ್ವಿುಸಲಾಗಿದೆ. ಅದೇ ರೀತಿ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಬಿಆರ್ಟಿಎಸ್ ಚಿಗರಿ ಬಸ್ಗಾಗಿ ಡಿಪೋ ನಿರ್ವಣವಾಗಿವೆ. ಅವಳಿ ನಗರ ಮಧ್ಯೆ ಒಂದು ರೀತಿ ‘ಮೆಟ್ರೋ ಆನ್ ರೋಡ್’ ಎಂಬಂತಾಗಿದೆ.
ಕಾರಿಡಾರ್ ವೀಕ್ಷಣೆ: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಫೆ. 2ರಂದು ಮಧ್ಯಾಹ್ನ 3ಕ್ಕೆ ಬಿಆರ್ಟಿಎಸ್ ಯೋಜನೆ ಉದ್ಘಾಟನೆ ನೆರವೇರಿಸುವರು. ಇಲ್ಲಿಯ ಹೊಸೂರ ರಾಯ್ಕರ ಮೈದಾನದಲ್ಲಿ ಸಮಾರಂಭದ ವೇದಿಕೆ ನಿರ್ವಿುಸಲಾಗಿದೆ. ಅದರ ಪಕ್ಕದಲ್ಲಿರುವ ವಾಯವ್ಯ ಸಾರಿಗೆ ಬಸ್ ನಿಲ್ದಾಣ, ಇಂಟರ್ಚೇಂಜ್, ನಗರ ಸಾರಿಗೆ ಬಸ್ ನಿಲ್ದಾಣಗಳನ್ನು ಉದ್ಘಾಟಿಸಿದ ನಂತರ ಚಿಗರಿ ಬಸ್ನಲ್ಲಿ ಪ್ರಯಾಣ ಮಾಡುವ ಉಪರಾಷ್ಟ್ರಪತಿಯವರು ನವನಗರವರೆಗೆ ತೆರಳಿ ಅಲ್ಲಿ ಕಾರಿಡಾರ್ ವೀಕ್ಷಣೆ ಮಾಡಿ ವೇದಿಕೆಗೆ ಆಗಮಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಇತರ ಜನಪ್ರತಿನಿಧಿಗಳು ಭಾಗವಹಿಸುವರು.