

ರೋಣ: ತಾಲೂಕಿನ ಅಲ್ಲಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದ ಹೆಸರು ಬೆಳೆ ಬೆಳವಣಿಗೆ ಹೊಂದುವಷ್ಟರಲ್ಲಿ ಚಿಗರಿಗಳ ದಾಳಿಗೆ ಹಾಳಾಗುತ್ತಿದೆ.
ತಾಲೂಕಿನಾದ್ಯಂತ ತೀವ್ರ ಬರ, ಮಳೆ ಕೊರತೆಯಿಂದ ಅಂತರ್ಜಲ ಕುಸಿದು ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬೆಳೆದಿದ್ದ ಹೆಸರು ಬೆಳೆ ವನ್ಯಜೀವಿಗಳ ಪಾಲಾಗುತ್ತಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ತಾಲೂಕಿನ ರೋಣ, ಜಕ್ಕಲಿ, ಅಬ್ಬಿಗೇರಿ, ಚಿಕ್ಕಮಣ್ಣೂರ, ಸಂದಿಗವಾಡ, ಅರಹುಣಸಿ ಹಾಗೂ ಸುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಚಿಗರಿಗಳ ಹಾವಳಿ ಹೆಚ್ಚಾಗಿದೆ. ಹಗಲಲ್ಲಿ ಹಳ್ಳದ ಬದಿ ಠಿಕಾಣಿ ಹೂಡಿ ರಾತ್ರಿ ವೇಳೆ ಜಮೀನುಗಳಿಗೆ ಲಗ್ಗೆಯಿಟ್ಟು ಬೆಳೆ ತಿನ್ನುತ್ತಿವೆ. ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ತಂದು ಬಿತ್ತಿದ ರೈತರು ಈಗ ಕೈಕೈ ಹಿಚುಕಿಕೊಳ್ಳುವಂತಾಗಿದೆ.
ಚಿಗರಿಗಳ ದಾಳಿ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. 20ರಿಂದ 25 ಚಿಗರಿಗಳ ಹಿಂಡು ಏಕಕಾಲಕ್ಕೆ ದಾಳಿ ಮಾಡಿಬಿಟ್ಟರೆ ಒಂದು ಪ್ರದೇಶದಲ್ಲಿ ಬೆಳೆದಿರುವ ಹೆಸರು ಬೆಳೆ ಕ್ಷಣಾರ್ಧದಲ್ಲಿ ಸರ್ವನಾಶವಾಗುತ್ತದೆ. ರೈತನ ಗೋಳು ಕೇಳುವವರಿಲ್ಲದಂತಾಗಿದೆ. | ಮಲ್ಲಣ್ಣ ಗಡಗಿ ರೈತ, ರೋಣ
ಶಾಶ್ವತ ಪರಿಹಾರಕ್ಕೆ ಚಿಂತಿಸಲಿ: ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಯಲ್ಲಿ ಅಂದಾಜು 80,000 ರೂ. ಹಾನಿಯಾದಾಗ 800 ರಿಂದ 1000 ರೂ. ವರೆಗೆ ಪರಿಹಾರ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಚೂರು-ಪಾರು ಪರಿಹಾರ ನೀಡಿ ಕೈತೊಳೆದುಕೊಂಡರೆ ಸಾಲದು. ವನ್ಯಜೀವಿಗಳಿಂದ ಬೆಳೆಗಳಿಗೆ ರಕ್ಷಣೆ ನೀಡಿ, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಚಿಂತನೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬೆಳೆ ನಾಶದ ಕುರಿತು ರೈತರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ನಂತರ ನಾವು ಬೆಳೆ ನಾಶವಾದ ಜಮೀನುಗಳಿಗೆ ತೆರಳಿ ಪರಿಶೀಲಿಸುತ್ತೇವೆ. ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. | ರಾಜು ದೊಂಡಕರ್, ವಲಯ ಅರಣ್ಯಾಧಿಕಾರಿ