ಚಿಕ್ಕೋಡಿಯಲ್ಲಿ ಶೀಘ್ರ ಆಕ್ಸಿಜನ್ ಘಟಕ ಆರಂಭ

7CKD2-Web
ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಹಸೀಲ್ದಾರ್ ಪ್ರವೀಣ ಜೈನ್, ಎಸ್.ಎಸ್.ಗಡಾದ, ವಿ.ವಿ.ಶಿಂಧೆ ಇತರರು ಇದ್ದರು.
Published on

ಚಿಕ್ಕೋಡಿ: ಕೋವಿಡ್ ಸೋಂಕಿತರಿಗಾಗಿ ಚಿಕ್ಕೋಡಿ ಪಟ್ಟಣ ಹಾಗೂ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಐಸಿಯು ಬೆಡ್‌ಗಳು, ವೆಂಟಿಲೇಟರ್ ಮತ್ತು ಆಕ್ಸಿಜನ್ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಬೇಕು. ಆಕ್ಸಿಜನ್ ಕೊರತೆಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವಂತೆ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೂಚನೆ ನೀಡಿದರು. ಇಲ್ಲಿನ ಲೋಕೋಪಯೋಗಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರೊನಾ ನಿಯಂತ್ರಣ ಕುರಿತ ಆರೋಗ್ಯ ಅಧಿಕಾರಿಗಳು ಮತ್ತು ತಹಸೀಲ್ದಾರ್ ಜತೆಗೆ ಸಭೆ ನಡೆಸಿ ಮಾತನಾಡಿದ ಅವರು, ಚಿಕ್ಕೋಡಿ ಪಟ್ಟಣಕ್ಕೆ ಕೇಂದ್ರ ಸರ್ಕಾರದಿಂದ ಒಎನ್‌ಜಿ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಶೀಘ್ರ ಆರಂಭಿಸುವಂತೆ ತಹಸೀಲ್ದಾರ್ ಮತ್ತು ಒಎನ್‌ಜಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಎರಡನೇ ಲಸಿಕೆ ನೀಡುವ ಕುರಿತು ಅಪರ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಜತೆಗೆ ಚರ್ಚಿಸಿ, ಸಮಾಜದಲ್ಲಿ ಸಾರ್ವಜನಿಕರ ಜತೆ ನೇರ ಸಂಪರ್ಕವಿರುವ ಕ್ಷೌರಿಕ ವೃತ್ತಿಯವರು, ಲಾಂಡ್ರಿ ಅಂಗಡಿ, ಹಿರಿಯ ನಾಗರಿಕರಿಗೆ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಮೊದಲ ಆದ್ಯತೆ ನೀಡಲು ಸೂಚಿಸಲಾಯಿತು. ಸರ್ಕಾರ ಯಾವುದೇ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಿಸಿದರೂ ಸಾರ್ವಜನಿಕರು ಸ್ವಯಂ ನಿರ್ಬಂಧ ಹಾಕಿಕೊಂಡು ಮನೆಯಿಂದ ಹೊರಗೆ ಬಾರೆದೆ ಇದ್ದಾಗ ಮಾತ್ರ ಕರೊನಾ ತಡೆಗಟ್ಟಲು ಸಾಧ್ಯ ಎಂದರು.

ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜೀವ ಕವಟಗಿಮಠ, ತಹಸೀಲ್ದಾರ್ ಪ್ರವೀಣ ಜೈನ, ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಎಸ್.ಎಸ್.ಗಡಾದ, ತಾಲೂಕು ಆರೋಗ್ಯ ಅಧಿಕಾರಿ ವಿಠ್ಠಲ ಶಿಂಧೆ, ಚಿಕ್ಕೋಡಿ, ಸದಲಗಾ ಪುರಸಭೆ ಮುಖ್ಯಾಧಿಕಾರಿಗಳು, ಕಬ್ಬೂರ, ಯಕ್ಸಂಬಾ ಪಪಂ
ಮುಖ್ಯಾಧಿಕಾರಿ ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net