

ಚಿಕ್ಕೋಡಿ: ಪ್ಲಾಸ್ಟಿಕ್ ಬಳಕೆ ಕೈಬಿಡುವ ಜತೆಗೆ ಕಸ ನಿರ್ವಹಣೆಗೆ ಪುರಸಭೆಯೊಂದಿಗೆ ಕೈ ಜೋಡಿಸುವ ಮುಖಾಂತರ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಸುಂದರ ರೋಗಿ ಮನವಿ ಮಾಡಿದರು.
ಪಟ್ಟಣದಲ್ಲಿ ಪುರಸಭೆ ಕಾರ್ಯಾಲಯದಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶುಕ್ರವಾರದಿಂದ ಹಮ್ಮಿಕೊಂಡಿದ್ದ ವೈಜ್ಞಾನಿಕವಾಗಿ ಘನತ್ಯಾಜ್ಯ ವಸ್ತು ನಿರ್ವಹಣೆ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜನ ಜಾಗೃತಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪುರಸಭೆಯ ಕಸದ ವಾಹನ ನಿಮ್ಮ ಮನೆಯ ಮುಂದೆ ಬಂದಾಗ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಿಯೇ ಕೊಡುವ ಮುಖಾಂತರ ಕಸ ನಿರ್ವಹಣೆಗೆ ಸಹಕಾರ ನೀಡಬೇಕು ಎಂದರು. ಚಿಕ್ಕೋಡಿ ಪಟ್ಟಣ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಹೇಗೆ ಮಾಡಬೇಕೆಂಬ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಪಟ್ಟಣದ ಸುಂದರೀಕರಣ ಹೆಚ್ಚಿಸಲು ಸಹಕರಿಸಬೇಕು ಎಂದು ಹೇಳಿದರು. ಆರೋಗ್ಯ ನಿರೀಕ್ಷಕ ಟಿ.ಕೆ.ಜಮಖಂಡಿ, ಪ್ರಕಾಶ ಹೊನಮಾನೆ, ಕಚೇರಿ ವ್ಯವಸ್ಥಾಪಕ ಟಿ.ಎ.ಕರನಿಂಗ, ಕಲಾವಿದರ ತಂಡದ ಮುಖಂಡ ಭರತ ಕಲಾಚಂದ್ರ ಅನೇಕರಿದ್ದರು. ಧುಳಗಣವಾಡಿಯ ಆಶಾದೀಪ ಸಮುದಾಯ ಕಲಾಕೇಂದ್ರದ ಕಲಾವಿದರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸುವ ನಾಟಕ ಪ್ರದರ್ಶಿಸಿದರು.