

ಚಿಕ್ಕೋಡಿ: ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಒತ್ತಾಯಿಸಿ ಕೈಗೊಂಡ ಧರಣಿ ಸತ್ಯಾಗ್ರಹ 10ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ಸ್ಥಳೀಯ ಶಾಸಕರು ಸೇರಿ ಯಾವೊಬ್ಬ ಜನಪ್ರತಿನಿಧಿಗಳು ವೇದಿಕೆಯತ್ತ ಸುಳಿಯದಿರುವುದು ಖೇದಕರ ಸಂಗತಿ. ಇದರಿಂದ ಚಿಕ್ಕೋಡಿ ಜಿಲ್ಲೆಯಾಗುವ ಬಗ್ಗೆ ನಮ್ಮ ಭಾಗದ ಜನಪ್ರತಿನಿಧಿಗಳಿಗೆ ಆಸಕ್ತಿ ಎಷ್ಟಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದು ಸಂಪಾದನಾ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಆಗ್ರಹಿಸಿ ಕೈಗೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಬುಧವಾರ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲೆ ಆಗುವುದರಿಂದ ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ಭಾಗದ ಎಲ್ಲ ಜನರಿಗೂ ಸಹಕಾರಿಯಾಗಲಿದೆ. 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯನ್ನು ಅಭಿವೃದ್ಧಿ ದೃಷ್ಟಿಯಿಂದ ವಿಭಜಿಸಿ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ಮಾಡುವ ಅಗತ್ಯವಿದೆ ಎಂದರು.
ಸದನದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಧ್ವನಿ ಎತ್ತಿರುವ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ಅದಕ್ಕೆ ಕೈಜೋಡಿಸಿರುವ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಕಾರ್ಯ ಶ್ಲಾಘನೀಯ. ಹೀಗಾಗಿ, ಚಿಕ್ಕೋಡಿ ಭಾಗದ ಎಲ್ಲ ಶಾಸಕರು ಧ್ವನಿ ಎತ್ತುವ ಮೂಲಕ ಪ್ರತ್ಯೇಕ ಜಿಲ್ಲೆಗೆ ರಚನಗೆ ಮುಂದಾಗಬೇಕು. ಬೇಡಿಕೆ ಈಡೇರಿಸದಿದ್ದಲ್ಲಿ ದಿ.ಉಮೇಶ ಕತ್ತಿ ಇಚ್ಛೆಯಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವ್ಯಾಪಾರಸ್ಥ ರವೀಂದ್ರ ಹಂಪಣ್ಣವರ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆಯಾಗಬೇಕು. ಉದ್ಯೋಗಾವಕಾಶ ಹಾಗೂ ವ್ಯಾಪಾರ-ವಹಿವಾಟು ಹೆಚ್ಚಲಿದೆ. ಅಥಣಿ ಭಾಗದ ಜನರಿಗೆ ದೂರದ ಬೆಳಗಾವಿಗೆ ಅಲೆದಾಡುವುದು ತಪ್ಪಲಿದೆ. ಜನಪ್ರತಿನಿಧಿಗಳು ಕೂಡಲೇ ಒಮ್ಮತದ ಆಸಕ್ತಿ ತೋರಿಸಿ ಚಿಕ್ಕೋಡಿ ಜಿಲ್ಲೆ ರಚನೆಗೆ ಶ್ರಮಿಸಬೇಕೆಂದು ಒತ್ತಾಯಿಸಿದರು.
ರವೀಂದ್ರ ಮಾಳಿ, ಖಾನಪ್ಪ ಬಾಡಕರ, ದುರದುಂಡೇಶ್ವರ ಬಡಿಗೇರ, ರುದ್ರಯ್ಯ ಹಿರೇಮಠ, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ಚಿದಾನಂದ ಶಿರೋಳೆ, ದಾದಾ ಮಗದುಮ್, ಸಂಜು ಲಟ್ಟೆ, ಅಪ್ಪಾಸಾಹೇಬ ಹಿರೆಕೋಡಿ, ಅಮೂಲ ನಾವಿ, ರಮೇಶ ಡಂಗೇರ, ಮಾಳಪ್ಪ ಕರೆಣ್ಣವರ, ದುಂಡಪ್ಪ ಚೌಗುಲೆ, ಶಿವಾನಂದ ಮದಾಳೆ ಇತರರಿದ್ದರು.