ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಸರ್ಕಾರಿ ಪ್ರೌಢಶಾಲೆಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೋಮವಾರ ಭೇಟಿ ನೀಡಿ ಕುಂದು-ಕೊರತೆಗಳನ್ನು ಪರಿಶೀಲಿಸಿ ಶಿಕ್ಷಕರ ಸಮಸ್ಯೆ ಆಲಿಸಿದರು.
ಶಾಲೆಯಲ್ಲಿರುವ ಸೌಲಭ್ಯಗಳನ್ನು ಗಮನಿಸಿದ ಮರಿತಿಬ್ಬೇಗೌಡ, ಮಕ್ಕಳ ಕಲಿಕೆ, ಶಿಕ್ಷಕರ ಕೊರತೆ ಬಗ್ಗೆ ಮುಖ್ಯಶಿಕ್ಷಕ ರಂಗಸ್ವಾಮಿ ಬಳಿ ಮಾಹಿತಿ ಪಡೆದುಕೊಂಡರು. ಶಿಕ್ಷಕರು ಗಡಿ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಕ್ಕಾಗಿ ಮನವಿ ನೀಡಿದರೆ, ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಬಳಿಕ ಸೋಮಹಳ್ಳಿ ವೀರ ಸಿಂಹಾಸನ ಶಿಲಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಮಲ್ಲಪ್ಪ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು. ಶ್ರೀ ಮಠದ ಪ್ರಗತಿ, ವಿದ್ಯಾಸಂಸ್ಥೆಗಳ ನಿರ್ವಹಣೆ ಬಗ್ಗೆ ಚರ್ಚಿಸಿದರು.ಮುಖಂಡರಾದ ಕಮರಹಳ್ಳಿ ಕುಮಾರ್, ಬಳ್ಳಾರಿ ಗೌಡ, ಷಡಕ್ಷರಿ, ಚಿಕ್ಕಾಟಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾಗೇಂದ್ರ, ಗುರು, ವಿದ್ಯಾಸಂಸ್ಥೆಯ ಪ್ರಾಂಶುಪಾಲ ಗೌರಿಶಂಕರ್, ಮುಖ್ಯ ಶಿಕ್ಷಕ ರಂಗಸ್ವಾಮಿ, ಮಹದೇವಸ್ವಾಮಿ ಹಾಜರಿದ್ದರು.