ಚಿಕ್ಕಲ್ಲೂರು ಜಾತ್ರೆ ಸುಸೂತ್ರವಾಗಿ ಸಂಪನ್ನ

10kglphoto6..
Published on

ಕೊಳ್ಳೇಗಾಲ: ಚಿಕ್ಕಲ್ಲೂರಿನ ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಮಂಗಳವಾರದ ಮುತ್ತುರಾಯರ ಸೇವೆ ಮೂಲಕ ತೆರೆಬಿದ್ದಿತ್ತು.

ಜ.6ರಂದು ಚಂದ್ರಮಂಡಲದ ಮೂಲಕ ಆರಂಭವಾದ ಜಾತ್ರೆಯು 7ರಂದು ಹುಲಿವಾಹನೋತ್ಸವ, 8ರಂದು ರುದ್ರಾಕ್ಷಿ ಮಂಟ ಪೋತ್ಸವ(ಮುಡಿಸೇವೆ), 9ರಂದು ಗಜವಾಹನೋತ್ಸವ (ಪಂಕ್ತಿಸೇವೆ) ಹಾಗೂ ಮಂಗಳವಾರ ಮುತ್ತುರಾಯರ ಸೇವೆ ನಡೆದು ಯಶಸ್ವಿಯಾಗಿ ಮುಕ್ತಾಯವಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ ಒಕ್ಕಲಿನ ಸಾವಿರಾರು ಭಕ್ತರು ಶ್ರೀ ಸಿದ್ದಪ್ಪಾಜಿ ಐಕ್ಯಗೊಂಡಿರುವ ಗದ್ದುಗೆ, ಹಳೇ ಮಠ ಹಾಗೂ ಹೊಸ ಮಠದ ಸಿದ್ದಪ್ಪಾಜಿ ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ನಿತ್ಯವೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಭಕ್ತಿಭಾವದಿಂದ ದೇವರ ಸೇವೆ ಮಾಡಿದರು. ದೇವಾಲಯ ಸುತ್ತಲೂ ಬಿಡಾರಗಳಲ್ಲಿ ಉಳಿದುಕೊಂಡು ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ಸಡಗರ ಸಂಭ್ರಮದಿಂದ ನಡೆಸಿದರು.

ಜಾತ್ರೆಯ ಕೊನೆ ದಿನ ದೇವಾಲಯ ಹಿಂಭಾಗವಿರುವ ಮುತ್ತುರಾಯನ ಗುಡಿಯ ಹನುಮಂತನ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಮುತ್ತುರಾಯನ ಗುಡಿಯಲ್ಲಿ ದೇವರ ದರ್ಶನ ಪಡೆದು ತೀರ್ಥ, ಹೂ ಪ್ರಸಾದ ಸ್ವೀಕರಿಸಿದರು. ದೇವಾಲಾಯ ಆವರಣದಲ್ಲಿ ಸಂಜೆ ರಾಜ ಬೊಪ್ಪೇಗೌಡನಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ಪೂಜೆ ಸಲ್ಲಿಸಿದ ಬಳಿಕ, ನೀಲಗಾರರು ಹಾಗೂ ದಾಸಯ್ಯ ಒಟ್ಟಾಗಿ ಸೇರಿ ಮುತ್ತುರಾಯರನ್ನು ಭಕ್ತಿಯಿಂದ ಪೂಜಿಸುವುದು ಪದ್ಧತಿ. ನಾಲ್ಕು ದಿನಗಳ ಕಾಲ ಕಪ್ಪು-ವಿಭೂತಿ ಧರಿಸಿ ನೀಲಗಾರರು ಸೇವೆ ಮಾಡುತ್ತಾರೆ. ಆದರೆ ಕೊನೆಯ ದಿನ ಮುತ್ತುರಾಯನ ಸೇವೆಯನ್ನು ನಾಮಧರಿಸಿ ಭಾವೈಕ್ಯತೆಯನ್ನು ಸಾರುವುದೇ ಇಲ್ಲಿನ ಪ್ರತೀತಿ. ಈ ವೇಳೆ ದಾಸಯ್ಯನವರು ತಮ್ಮ ದೇವರ ಪ್ರತೀಕವಾದ ಅರಗೆಗಳನ್ನು ಪೂಜಿಸಿದರೆ, ನೀಲಗಾರರು, ಕಂಡಾಯಗಳನ್ನು ಒತ್ತು ದೇವಾಲಯ ಸುತ್ತಲೂ ಪೂಜೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net