

ಬಾಳೆಹೊನ್ನೂರು: ಚಿಕ್ಕಮಗಳೂರು-ತಿರುಪತಿಗೆ ರೈಲು ಸೇವೆ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದು, ಅದು ಶೀಘ್ರದಲ್ಲಿ ಸಾಕಾರಗೊಳ್ಳಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳನ್ನು ಸಬಲೀಕರಣ ಮಾಡುವುದು ನನ್ನ ಪ್ರಮುಖ ಉದ್ದೇಶವಾಗಿದ್ದು, ಚಿಕ್ಕಮಗಳೂರು-ಬೆಂಗಳೂರು ನಡುವಿನ ರೈಲ್ವೇ ಸಂಪರ್ಕವನ್ನು ಮತ್ತಷ್ಟು ಸರಳವಾಗಿ ಜನರಿಗೆ ತಲುಪುವಂತೆ ಮಾಡುವ ಉದ್ದೇಶವಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಕಾಫಿ ಬೆಳೆಗಾರರ ಸಾಲದ ಬಗ್ಗೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದು, ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಒನ್ ಟೈಮ್ ಸೆಟ್ಲ್‌ಮೆಂಟ್‌ಗೆ ಅವಕಾಶ ನೀಡಬೇಕು ಹಾಗೂ 6 ತಿಂಗಳ ಕಾಲ ಸಾಲವನ್ನು ಮುಂದೂಡುವಂತೆ ಕೋರಲಾಗಿದೆ. ಹತ್ತಾರು ಲಕ್ಷ ರೂ. ವಿನಾಯಿತಿಯನ್ನು ಸಚಿವರು ಪ್ರಕಟಿಸಿದ್ದಾರೆ ಎಂದರು.
ಅಡಕೆ ಬೆಳೆಗಾರರ ಸಮಸ್ಯೆ ಅಧ್ಯಯನ ಮಾಡಲಾಗುತ್ತಿದೆ. ಅಡಕೆ ಬೆಳೆಗಾರರ ಸಭೆ ಕರೆಯುತ್ತಿದ್ದೇನೆ. ರಾಜ್ಯ ಸರ್ಕಾರ ಅಧ್ಯಯನ ಮಾಡಿ ಅಡಕೆ ಆಹಾರವೇ ಹೊರತು ವಿಷಯುಕ್ತ ಅಲ್ಲ ಎಂದು ಹೇಳಿರುವ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಹೇಳಿದರು.
ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಇಂಜಿನಿಯರ್, ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಂದಿದೆ. ಆದರೆ ಗುತ್ತಿಗೆದಾರರು ಇಂಜಿನಿಯರ್‌ಗಳ ಅಧೀನದಲ್ಲಿದ್ದು ಕೆಲಸ ನಿರ್ವಹಿಸಬೇಕಾಗಿದೆ. ಇನ್ನುಮುಂದೆ ಇಂಜಿನಿಯರ್, ಗುತ್ತಿಗೆದಾರರು ಯೋಜನೆಯ ಅನುಷ್ಠಾನಕ್ಕೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇದ್ದರೆ ಕ್ರಿಮಿನಲ್ ದಾವೆ ಹೂಡಲು ಶಿಫಾರಸು ಮಾಡುವುದಾಗಿ ತಿಳಿಸಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 217 ಬಿಎಸ್‌ಎನ್‌ಎಲ್ ಟವರ್‌ಗಳು 3ಜಿ ಇದ್ದು, ಸುಮಾರು 100ಕ್ಕೂ ಅಧಿಕ ಟವರ್‌ಗಳು 4ಜಿ ಇವೆ. ಹೊಸ 28 ಟವರ್‌ಗಳು ಮಂಜೂರಾಗಿದೆ. ಈಗಾಗಲೇ 17 ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನೂ 2ಕ್ಕೆ ಸ್ಥಳ ಬೇಕಿದೆ. ಇನ್ನೂ 30 ಹೊಸ ಟವರ್‌ಗೆ ಬೇಡಿಕೆ ಬಂದಿದೆ. 6 ತಿಂಗಳಲ್ಲಿ ಬಹಳಷ್ಟು ಸುಧಾರಣೆ ಮಾಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದಿಂದ 58 ಹೊಸ ಬ್ಯಾಟರಿಗಳನ್ನು ಜಿಲ್ಲೆಗೆ ಕಳುಹಿಸಿದ್ದು, ಇನ್ನೂ 42 ಬ್ಯಾಟರಿಗಳ ಬೇಡಿಕೆ ಬಂದಿದೆ ಎಂದು ಮಾಹಿತಿ ನೀಡಿದರು.
ಶೃಂಗೇರಿಯಲ್ಲಿ ಶಾರದಾ ಪೀಠದ ಯಾತ್ರಿಗಳ ವಾಹನ ಪಾರ್ಕಿಂಗ್‌ಗೆ ನೀಡಿದ್ದ ಜಾಗವನ್ನು ಜಿಲ್ಲಾಧಿಕಾರಿ ವಾಪಸ್ ಪಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಹಿಂದು ಮಠ, ಮಂದಿರಗಳಿಗೆ ಅನ್ಯಾಯ ಆಗಬಾರದು ಎಂಬ ವಿಚಾರವನ್ನು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಅದನ್ನು ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜ.10ರಂದು ಈ ಬಗ್ಗೆ ಸಭೆ ನಡೆಯಲಿದೆ. ತಾಳ್ಮೆಯಿಂದ ಇದ್ದೇವೆ. ತಾಳ್ಮೆ ಹಿಂದುಗಳ ದೌರ್ಬಲ್ಯವಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಮುಖಂಡರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಪ್ರಭಾಕರ್ ಪ್ರಣಸ್ವಿ, ಕೆ.ಟಿ.ವೆಂಕಟೇಶ್, ದೀಪಕ್ ದೊಡ್ಡಯ್ಯ, ಶಶಿ ಆಲ್ದೂರು, ವಿನೋದ್ ಬೊಗಸೆ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಇತರರಿದ್ದರು.