ಚಿಕ್ಕಭೇರ್ಯ ಸಮೀಪದ ಅರಣ್ಯಕ್ಕೆ ಬೆಂಕಿ

Screenshot_20230226-204357_1
ಚಿಕ್ಕಭೇರ್ಯ ಗ್ರಾಮದ ಸಮೀಪ ಮಠದ ಕಾವಲು ಪ್ರದೇಶದ ಸುಮಾರು 20 ಎಕರೆ ಅರಣ್ಯ ಪ್ರದೇಶಕ್ಕೆ ಬಿದ್ದ ಬೆಂಕಿಯನ್ನು ನಂದಿಸುತ್ತಿರುವುದು.
Published on

ಸಾಲಿಗ್ರಾಮ: ತಾಲೂಕಿನ ಚಿಕ್ಕಭೇರ್ಯ ಗ್ರಾಮದ ಸಮೀಪ ಮಠದ ಕಾವಲು ಪ್ರದೇಶದ ಸುಮಾರು 20 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು, ಸಣ್ಣಪುಟ್ಟ ಸಸಿಗಳು ನಾಶವಾಗಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

ಮೈಸೂರು- ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿರುವ ಈ ಅರಣ್ಯದಲ್ಲಿ ಇದ್ದಕ್ಕಿದ್ದಂತೆ ಭಾನುವಾರ ಬೆಂಕಿ ಕಾಣಿಸಿಕೊಂಡು, ಜ್ವಾಲೆ ವಾಪಿಸಿದೆ. ಅಕ್ಕಪಕ್ಕದ ಜಮೀನಿನ ರೈತರು ಕೂಡಲೇ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೆ.ಆರ್.ಪೇಟೆ ಮತ್ತು ಕೆ.ಆರ್.ನಗರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎರಡೂ ಜಿಲ್ಲೆಯ ಅರಣ್ಯ ಅಧಿಕಾರಿಗಳು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು.
ಚಿಕ್ಕಭೇರ್ಯ ಗ್ರಾಮಸ್ಥರು ಅರಣ್ಯದ ಒಳಗಡೆ ನುಗ್ಗಿ ಜೀವವನ್ನು ಲೆಕ್ಕಿಸದೆ ಮರದ ಹಸಿ ಸೊಪ್ಪಿನಿಂದ ಬೆಂಕಿಯನ್ನು ನಂದಿಸಲು ಮುಂದಾದರು. ಆದರೂ ಸಣ್ಣಪುಟ್ಟ ಸಸಿಗಳು ಸುಟ್ಟು ಭಸ್ಮವಾದರೆ ದೊಡ್ಡ ಮರಗಳಿಗೆ ಯಾವುದೇ ಅನಾಹುತ ಆಗಿಲ್ಲ ಎಂದು ಆರ್‌ಎಫ್‌ಒ ರಶ್ಮಿ ತಿಳಿಸಿದರು. ತಮ್ಮೊಂದಿಗೆ ಸಹಕಾರ ನೀಡಿದ ಎಲ್ಲ ರೈತರು ಹಾಗೂ ಚಿಕ್ಕಭೇರ್ಯ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಒಂದು ವಾರದಿಂದ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಆದರೆ ಅವರ ನಿರ್ಲಕ್ಷೃವೇ ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಆದರೆ ರೈತರು ಜಮೀನಿನಲ್ಲಿ ಹಾಕಿಕೊಂಡ ಬೆಂಕಿ ಆಕಸ್ಮಿಕವಾಗಿ ಕಾಡಿಗೆ ತಗುಲಿರಬಹುದು ಎಂದು ಅರಣ್ಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣವೇನು ಎಂದು ಪರಿಶೀಲನೆ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
ಬೆಂಕಿ ಅವಘಡದಿಂದ ಸುತ್ತಮುತ್ತಲಿನ ಗ್ರಾಮಗಳಾದ ಸಿಂಗನಹಳ್ಳಿ, ಮಾಚಹೊಳಲು, ಭೇರ್ಯ, ಚಿಕ್ಕಭೇರ್ಯ, ಕಾವಲು ಹೊಸೂರು, ಮುಂಜನಹಳ್ಳಿ ಗ್ರಾಮದ ಜನರು ಬೆಚ್ಚಿಬಿದ್ದರು. ಕಾಡಿನಲ್ಲಿದ್ದ ಪ್ರಾಣಿಗಳಿಗೆ ಯಾವುದೇ ಅನಾಹುತ ಆಗಿಲ್ಲ.

ಕಾಡಂಚಿನ ಜಮೀನಿನಲ್ಲಿ ರೈತರು ಯಾವುದೇ ರೀತಿಯ ಬೆಂಕಿಯನ್ನು ಹಾಕಬಾರದು. ಹಾಕಿದರೆ ಅನಾಹುತಕ್ಕೆ ನೀವೇ ಕಾರಣರಾಗುತ್ತೀರಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಒಂದೆಡೆ ಬೆಂಕಿ ಬಿದ್ದರೆ ಇಡೀ ಕಾಡು ಸುಟ್ಟು ಹೋಗುವ ಸಂಭವ ಇರುತ್ತದೆ. ಈಗ ಆಗಿರುವ ಘಟನೆಗೆ ಇಲಾಖೆಯಿಂದ ಪರಿಶೀಲನೆ ಮಾಡುತ್ತೇವೆ. ಮೊದಲು ಬೆಂಕಿ ಉತ್ಪತ್ತಿ ಆಗಿದ್ದು ಎಲ್ಲಿ ಎಂದು ವರದಿ ಬಂದ ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net