ಚಿಕ್ಕಬೆಟ್ಟದ ಯೇಸು ಪ್ರತಿಮೆ ತೆರವು; ಜಿಲ್ಲಾಡಳಿತ ಸೂಚನೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ

3-vij-4a-yesu prathime teravu
Published on

ವಿಜಯಪುರ: ಜಿಲ್ಲಾಡಳಿತದ ಆದೇಶದಂತೆ ದೊಡ್ಡಸಾಗರಹಳ್ಳಿಯ ಚಿಕ್ಕಬೆಟ್ಟದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಯೇಸು ಪ್ರತಿಮೆ, ಶಿಲುಬೆ ಹಾಗೂ ‘ಮಹಿಮಾಬೆಟ್ಟಕ್ಕೆ ದಾರಿ’ ಎಂದಿದ್ದ ನಾಮಲಕವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದ್ದಾರೆ.

ಇತ್ತೀಚೆಗೆ ದೊಡ್ಡಸಾಗರಹಳ್ಳಿಯ ಚಿಕ್ಕಬೆಟ್ಟದ ಮೇಲೆ ಯೇಸು ಪ್ರತಿಮೆ ಹಾಗೂ ಶಿಲುಬೆಗಳು ಸ್ಥಾಪನೆಯಾಗಿದ್ದವು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ವಾರದ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತೆರವುಗೊಳಿಸುವಂತೆ ಕೋರಿದ್ದರು.

ಸರ್ವೇ ನಂ. 158ರಲ್ಲಿ 4 ಎಕರೆ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾಗಿದ್ದು, ಇದನ್ನು ಲಕ್ಷ್ಮೀ ನರಸಿಂಹಸ್ವಾಮಿಬೆಟ್ಟ (ಚಿಕ್ಕಬೆಟ್ಟ) ಎಂದು ಕರೆಯಲಾಗುತ್ತಿದೆ. ಬೆಟ್ಟದ ಮೇಲಿನ ವಿನಾಯಕ ಹಾಗೂ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಗಳನ್ನು ನಾಶಗೊಳಿಸಿ, ಬೆಟ್ಟವನ್ನು ಸ್ವಾಧೀನಕ್ಕೆ ಪಡೆದು ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಹಿಂದುಗಳ ಜಾಗ ಅತಿಕ್ರಮಿಸಿ, ಕ್ರಿಶ್ಚಿಯನ್ ಮಿಷನರಿಗಳು ಆ ಜಾಗದಲ್ಲಿ ಪ್ರತಿಮೆ ಹಾಗೂ ಶಿಲುಬೆಯನ್ನಿಟ್ಟು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದರು.

ತಹಸೀಲ್ದಾರ್ ಕಾರ್ಯಾಚರಣೆ: ತಹಸೀಲ್ದಾರ್ ಅಜಿತ್ ರೈ ಅವರು ಪೊಲೀಸ್ ಬಂದೋಬಸ್ತ್‌ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು. ಶಿಲುಬೆ ಹಾಗೂ ಪ್ರತಿಮೆಗಳನ್ನು ತೆರವುಗೊಳಿಸಿದ್ದು, ಪ್ರತಿಮೆಯನ್ನು ಗ್ರಾಮದ ಚರ್ಚ್‌ನಲ್ಲಿ ಇಡಲಾಗಿದೆ. ವಿಜಯಪುರ ನಾಡಕಚೇರಿ ಉಪತಹಸೀಲ್ದಾರ್ ಚಿದಾನಂದ್, ದೊಡ್ಡಬಳ್ಳಾಪುರ ಡಿವೈಎಸ್‌ಪಿ ಟಿ.ರಂಗಪ್ಪ, ವಿಜಯಪುರ ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ್, ಸಬ್‌ಇನ್‌ಸ್ಪೆಕ್ಟರ್ ಎಚ್.ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚಿಕ್ಕಬೆಟ್ಟದ ಬದಲಿಗೆ ಮಹಿಮಾಬೆಟ್ಟ!: ಕಂದಾಯ ಇಲಾಖೆಯಲ್ಲಿ ನಮೂದಾದ ಚಿಕ್ಕಬೆಟ್ಟದಲ್ಲಿ ಯೇಸು ಪ್ರತಿಮೆ ಸ್ಥಾಪಿಸಿದ ನಂತರ ಬೆಟ್ಟದ ಹೆಸರು ಬದಲಿಸಿ ಮಹಿಮಾ ಬೆಟ್ಟಕ್ಕೆ ದಾರಿ ಹಾಗೂ ಮಹಿಮಾ ನಗರ-ದೊಡ್ಡಸಾಗರಹಳ್ಳಿ ಎಂದು ಪುನರ್ ನಾಮಕರಣ ಮಾಡಿ ಲಕ ಅಳವಡಿಸಲಾಗಿತ್ತು. ಇದೀಗ ಆ ಲಕವನ್ನೂ ತೆರವುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net