ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ, ಮಂಡಿಕಲ್ಲು ಹೋಬಳಿಯಲ್ಲಿ 3, ಅಡ್ಡಗಲ್ಲು ವ್ಯಾಪ್ತಿಯಲ್ಲಿ 2.9 ತೀವ್ರತೆ ದಾಖಲು

21cbp1a
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಇತ್ತೀಚಿಗೆ ಭೂಮಿ ನಡುಗಿದ ಅನುಭವ, ಭಯದಿಂದ ಹೊರಬರುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಬುಧವಾರ ಬೆಳಗ್ಗೆ ಎರಡು ಬಾರಿ ಭೂಮಿ ಕಂಪಿಸಿದ್ದು, ಅಲ್ಲಲ್ಲಿ ಮನೆಗಳು ಬಿರುಬಿಟ್ಟಿವೆ.

ಚಿಕ್ಕಬಳ್ಳಾಪುರದ ಮಂಡಿಕಲ್ಲು ಹೋಬಳಿ ಕೇಂದ್ರದಿಂದ 1.4 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.10 ಮತ್ತು ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ 1.23 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.14 ರ ವೇಳೆಯಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ ಕ್ರಮವಾಗಿ 3 ಮತ್ತು 2.9 ಕಂಪನದ ತೀವ್ರತೆ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮೋಡ ಮುಸುಕಿದ ವಾತಾವರಣ, ಮೈಕೊರೆಯುವ ಚಳಿಯಿಂದಾಗಿ ಮನೆಯೊಳಗಿದ್ದವರು ಬೆಳ್ಳಂಬೆಳಗ್ಗೆಯೇ ಭೂಮಿ ಅಲುಗಾಡುತ್ತಿರುವ ಅನುಭವ ಅರಿವಿಗೆ ಬರುತ್ತಿದ್ದಂತೆ ಹೊರಗೆ ಓಡಿ ಬಂದಿದ್ದಾರೆ. ಕೆಲ ನಿಮಿಷಗಳ ಅಂತರದಲ್ಲಿ ಎರಡನೇ ಬಾರಿ ಕಂಪಿಸಿ ಜನರನ್ನು ಭಯಭೀತರನ್ನಾಗಿದೆ.

ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಸಂಭವಿಸಿದ ಕಂಪನದ ತೀವ್ರತೆ ಕಡಿಮೆ ಇದೆ. ಸಣ್ಣ ಪ್ರಮಾಣದ ಅಲುಗಾಟದ ಅನುಭವ, ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಬಿರುಕು ಬಿಟ್ಟ ಮನೆಗಳು: ಭೂಕಂಪನ ಕಂಡು ಬಂದ ತಾಲೂಕಿನ ಹೊಸಹಳ್ಳಿ, ದೊಡ್ಡಿಹಳ್ಳಿ, ಬಂಡಹಳ್ಳಿ, ಅರೂರು, ಭೋರ್ಗಪತಿ ಗ್ರಾಮ ಸೇರಿ ವಿವಿಧೆಡೆ ಮನೆಗಳು ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. ಆದರೆ, ಯಾವುದೇ ಕಟ್ಟಡಗಳು ಕುಸಿತಗೊಂಡಿರುವ, ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವ ವರದಿಯಾಗಿಲ್ಲ.

ಸ್ಥಳಕ್ಕೆ ಅಧಿಕಾರಿಗಳ ದೌಡು: ಭೂಕಂಪನದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಜನರಲ್ಲಿ ಧೈರ್ಯ ತುಂಬಿದರು. ಜಿಲ್ಲೆ ಸುರಕ್ಷಿತ ವಲಯಲ್ಲಿದೆ, ಇಲ್ಲಿ ಅಪಾಯಕಾರಿ ಮಟ್ಟದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಕಡಿಮೆಯಿದ್ದು ಸಣ್ಣ ಪ್ರಮಾಣದಲ್ಲಿ ಭೂಮಿ ಅಲುಗಾಡಿದ ಅನುಭವವಾಗಿದೆ. ಇದರಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ದಟ್ಟ ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಹೋಗಿರಲಿಲ್ಲ. ಇದ್ದಕ್ಕಿದ್ದಂತೆ ನೆಲ ಅಲುಗಾಡಿದ್ದರಿಂದ ಭಯವಾಯಿತು. ಬಳಿಕ ಭೂಕಂಪನವಾಗಿದೆ ಎಂಬುದು ತಿಳಿದು ಬಂತು. ರಾಜಶೇಖರ್, ಸ್ಥಳೀಯ ನಿವಾಸಿ, ಮಿಟ್ಟಹಳ್ಳಿ

ಮತ್ತೆ ಮತ್ತೆ ಕಂಪನ: ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಭೂಕಂಪನದ ಆತಂಕ ಮತ್ತೆ ಮತ್ತೆ ಅನುಭವಕ್ಕೆ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ನವೆಂಬರ್‌ನಲ್ಲಿ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ, ರಾಸಪಲ್ಲಿ, ವೆಂಕಟರೆಡ್ಡಿಪಾಳ್ಯ ಸೇರಿ ವಿವಿಧೆಡೆ ಗ್ರಾಮಗಳಲ್ಲಿ ನಾಲ್ಕೈದು ಬಾರಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಆಗಾಗ ಮನೆಯಲ್ಲಿದ್ದ ಪಾತ್ರೆ ಸೇರಿ ಇತರ ಸಾಮಗ್ರಿಗಳು ಕೆಳಕ್ಕೆ ಬಿದ್ದು ಜನರು ಮನೆಯಿಂದ ಹೊರಗೆ ಓಡಿದ್ದಲ್ಲದೆ, ಸ್ಥಳಾಂತರಕ್ಕೂ ಪಟ್ಟು ಹಿಡಿದಿದ್ದರು. ಈ ಭಯದಿಂದ ಹೊರಬರುವಷ್ಟರಲ್ಲಿ ಶಿಡ್ಲಘಟ್ಟ ತಾಲೂಕಿನ ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಡಿ.13 ರಂದು ಭಾರೀ ಶಬ್ದದೊಂದಿಗೆ ಭೂಕಂಪನದ ಅನುಭವಾಗಿ ಜಿಲ್ಲೆಯನ್ನು ಮತ್ತೆ ಭಯಕ್ಕೆ ದೂಡಿತ್ತು.

ಭೂಕಂಪನದ ಅನುಭವ ಉಂಟಾದ ಗ್ರಾಮಗಳಲ್ಲಿ ಜನರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಲಾಗಿದೆ. ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿಗಾ ವಹಿಸಲು ಸೂಚಿಸಲಾಗಿದೆ. ಆರ್.ಲತಾ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net