ಚಿಕ್ಕಬಳ್ಳಾಪುರದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು!

10CBP22
Published on

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಜಿಲ್ಲಾಕೇಂದ್ರ ಸೇರಿ ತಾಲೂಕಿನ ಬಹುತೇಕ ರಸ್ತೆಗಳಲ್ಲಿ ಗುಂಡಿಗಳೇ ರಾರಾಜಿಸುತ್ತಿವೆ, ಪ್ರಯಾಣಿಕರಿಗೆ ನರಕದರ್ಶನವಾಗುತ್ತಿದ್ದು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಕೆಸರಿನ ಅಭಿಷೇಕ ಮಾಮೂಲಿಯಾಗಿದೆ.

ಬೆಂಗಳೂರು ಮಹಾನಗರಕ್ಕೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಉಪ ನಗರವನ್ನಾಗಿ ಅಭಿವೃದ್ಧಿಪಡಿಸುವ ಜನಪ್ರತಿನಿಧಿಗಳ ಭರವಸೆ ಹಾಗೂ ಕೋಟ್ಯಂತರ ರೂ. ಅನುದಾನ ಬಿಡುಗಡೆಯ ನಡುವೆಯೂ ಇಲ್ಲಿನ ಹದಗೆಟ್ಟ ರಸ್ತೆಗಳು ವಸ್ತುಸ್ಥಿತಿಗೆ ಕನ್ನಡಿಯಾಗಿವೆ.

ಜಿಲ್ಲಾಕೇಂದ್ರದಲ್ಲಿನ ರಸ್ತೆಗಳೇ ಸರಿಯಾಗಿಲ್ಲ, ಇನ್ನೂ ಗ್ರಾಮೀಣ ಭಾಗದ ರಸ್ತೆಗಳು ಸ್ಥಿತಿಯನ್ನಂತೂ ವಿಶೇಷವಾಗಿ ಹೇಳಬೇಕಿಲ್ಲ, ಕೆಸರು ಮಣ್ಣು, ಜಲ್ಲಿಕಲ್ಲು, ಗುಂಡಿಗಳೇ ತುಂಬಿರುವ ರಸ್ತೆಗಳೇ ಹೆಚ್ಚಾಗಿದ್ದು, ಪ್ರಯಾಸ ಪಡುತ್ತಲೆ ಸಂಚರಿಸುವಂತಾಗಿದೆ.

ಜಿಲ್ಲೆ ಹೂವು, ತರಕಾರಿ, ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಪ್ರತಿನಿತ್ಯ ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹದಗೆಟ್ಟ ರಸ್ತೆಗಳಿಂದ ಹೈರಾಣರಾಗುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಅನೇಕರ ಸುಗಮ ಪ್ರಯಾಣಕ್ಕೆ ತೊಡಕಾಗಿದೆ.

ಮುಖ್ಯರಸ್ತೆಗಳ ಪಾಡು: ನಗರದ ಕಂದವಾರ ಮತ್ತು ನಂದಿ ಮಾರ್ಗದ ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ಸಣ್ಣ ಮಳೆ ಬಂತೆಂದರೆ 1 ಅಡಿಗೂ ಹೆಚ್ಚು ನೀರು ನಿಲ್ಲುತ್ತದೆ. ಇಲ್ಲಿ ಸಂಚರಿಸುವ ಜನರಿಗೆ ವಾಹನಗಳಿಂದ ಆಗಾಗ ಕೆಸರಿನ ಅಭಿಷೇಕವಾಗುತ್ತಿದೆ. ಇಲ್ಲಿನ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಮಂಜೂರಾಗಿದ್ದು ಇನ್ನೂ ಟೆಂಡರ್ ಪ್ರಕ್ರಿಯೆಯಲ್ಲೇ ಕೆಲಸ ತೆವಲುತ್ತಿದೆ. ಮುನ್ಸಿಪಲ್ ಬಡಾವಣೆಯಲ್ಲಿ ಐಡಿಎಸ್‌ಎಂಟಿ ಬಡಾವಣೆ ಹೊಂದಿಕೊಂಡಿರುವ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಪ್ರಶಾಂತ ನಗರ, ಸರ್ ಎಂ.ವಿ.ಬಡಾವಣೆ, ವಾಪಸಂದ್ರ ಸೇರಿ ಹಲವೆಡೆ ಸಂಚಾರ ದುಸ್ತರವಾಗಿದ್ದರೆ, ಡಾಂಬರು ಕಾಣದ ಮಣ್ಣಿನ ರಸ್ತೆಗಳು ಮಳೆ ಬಂದಾಗ ಕೆಸರಿನಗದ್ದೆಗಳಾಗುತ್ತವೆ.

ಹಳ್ಳಿಗಳಲ್ಲೂ ಮತ್ತಷ್ಟು ಗೋಳು: ಗ್ರಾಮೀಣ ಭಾಗದ ರಸ್ತೆಗಳ ದುಸ್ಥಿತಿಯನ್ನು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗಳೇ ಸಾರುತ್ತಿವೆ. ಇವು ರಸ್ತೆಗಳೋ ಅಥವಾ ಕೆಸರಿನ ಗದ್ದೆಗಳೋ ಎನ್ನುವುದಕ್ಕೆ ವ್ಯತ್ಯಾಸವಿಲ್ಲದಂತಿವೆ. ನಂದಿ, ಮಂಚನಬಲೆ, ಅಂಕಣಗೊಂದಿ ರಸ್ತೆಗಳೇ ಉದಾರಹಣೆಯಾಗಿವೆ.

ಮಳೆಗಾಲದಲ್ಲಿ ರಸ್ತೆಗಳ ದುಸ್ಥಿತಿಯು ದರ್ಶನವಾಗುತ್ತದೆ. ಬೇಸಿಗೆಯಲ್ಲಿ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಮಳೆ ಬೀಳುವಾಗ ಕಾಮಗಾರಿ ಕೈಗೊಳ್ಳುವುದು ವಿಪರ್ಯಾಸ. ನಂದಿ ರಸ್ತೆಗೆ ಅನುದಾನ ಬಿಡುಗಡೆಯಾಗಿದ್ದರೂ ಇದುವರೆಗೂ ಅಭಿವೃದ್ಧಿ ಕಂಡಿಲ್ಲ. ಕೆಸರು ಗುಂಡಿಗಳ ನಡುವೆ ಜನರು ಓಡಾಡಲು ಕಷ್ಟವಾಗಿದೆ. ನಾಗೇಂದ್ರ ಬಾಬು, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net