ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ಆದೇಶ, ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆ ಸೂಚನೆ

18CBP3(megadairy)
Published on

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕಿಸುವ ಸಚಿವ ಸಂಪುಟದ ಸಮ್ಮತಿಯ ಬಳಿಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಕೋಲಾರ ಹಾಲು ಒಕ್ಕೂಟದ ವಿಭಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಚಿಕ್ಕಬಳ್ಳಾಪುರ ಒಕ್ಕೂಟ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂಬುದಾಗಿ ಎನ್‌ಡಿಡಿಬಿ ಕನ್ಸಲೆಂಟ್, ನಿವೃತ್ತ ಡಿಜಿಎಂ ಆರ್.ವಿ.ಎಂ.ಮೋಹನ್‌ಕುಮಾರ್ ಕರ್ನಾಟಕ ಸಹಕಾರಿ ಹಾಲು ಮಹಾಮಂಡಲಕ್ಕೆ ವರದಿ ನೀಡಿದ್ದು ಈ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಒಕ್ಕೂಟದ ಪ್ರತ್ಯೇಕತೆಯ ಆಡಳಿತಾತ್ಮಕ ಕ್ರಮಗಳಿಗೆ ಆದೇಶಿಸಿದೆ.

ವಿಭಜನೆಯಾಗಲಿರುವ ಒಕ್ಕೂಟಗಳಿಗೆ ನಿಯಮಾನುಸಾರ ಆಸ್ತಿ ಜವಾಬ್ದಾರಿ ಹಂಚಿಕೆ, ಮೂಲ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಲು ಕೂಡಲೇ ಸಮಿತಿ ರಚನೆ, ಆಸ್ತಿ ಹಂಚಿಕೆ ಜವಾಬ್ದಾರಿಯನ್ನು 6 ತಿಂಗಳೊಳಗೆ ಪೂರ್ಣಗೊಳಿಸುವುದು, ಮದರ್ ಡೈರಿಯು ಕೆಎಂಎಫ್‌ನಿಂದ ಅನುಮೋದಿತ ದರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹಾಲು ಸಂಗ್ರಹಿಸಿ ಕ್ಷೀರಭಾಗ್ಯ ಯೋಜನೆಗೆ ಅಗತ್ಯ ಹಾಲಿನ ಪುಡಿ ಉತ್ಪಾದಿಸಲು 3 ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

ಹೊಸ ಒಕ್ಕೂಟದ ಆರಂಭಿಕ ವರ್ಷಗಳಲ್ಲಿ 2019-20ಕ್ಕೂ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ ಡೇರಿ ಹಾಲು ಖರೀದಿಸಿ ಪ್ರೋತ್ಸಾಹಿಸುವಿಕೆ, ಪ್ಯಾಕಿಂಗ್ ಘಟಕ ಸ್ಥಾಪನೆಯಾಗುವವರೆಗೆ ಗ್ರಾಹಕರಿಗೆ ಹಾಲು ಮತ್ತು ಮೊಸರನ್ನು ವಿತರಕರ ದರದಲ್ಲಿ ಪೂರೈಸಲು, ಮೆಗಾ ಡೈರಿಯಲ್ಲಿ ಪ್ಯಾಕಿಂಗ್ ಘಟಕ ಸ್ಥಾಪನೆಯ ಬಳಿಕ ಬೆಂಗಳೂರಿನಲ್ಲಿ ಕೋಲಾರಕ್ಕೆ ಹಂಚಿಕೆಯಾಗಿರುವ ಮಾರುಕಟ್ಟೆ ಪ್ರದೇಶವನ್ನು ಚಿಕ್ಕಬಳ್ಳಾಪುರ ಒಕ್ಕೂಟಕ್ಕೂ ಹಂಚಿಕೆ ಮಾಡುವುದು, ಒಕ್ಕೂಟವು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳ್ಳುವವರೆಗೆ ಕೋಲಾರ ಒಕ್ಕೂಟ ನೇರ ಸಂಸ್ಕರಣೆ ಮತ್ತು ಪ್ಯಾಕಿಂಗ್ ಜವಾಬ್ದಾರಿ ವಹಿಸಿಕೊಳ್ಳುವಿಕೆಯ ಆಡಳಿತಾತ್ಮಕ ಕ್ರಮಗಳಿಗೆ ಅನುಮೋದನೆ ನೀಡಲಾಗಿದೆ.

ಪ್ರತ್ಯೇಕ ಒಕ್ಕೂಟ ರಚನೆ ಅನುಕೂಲ: 2016ರ ಸೆಪ್ಟೆಂಬರ್ 23 ರಂದು ನಡೆದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಾಧಕ-ಬಾಧಕಗಳ ಚರ್ಚೆಯ ನಡುವೆ ಇತ್ತೀಚೆಗೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಘೋಷಿಸಲಾಯಿತು. ಹಾಗೆಯೇ ಸಾಧ್ಯತಾ ವರದಿಯೂ ಪ್ರತ್ಯೇಕತೆಯ ತೀರ್ಮಾನದಿಂದ ಅನುಕೂಲ ಎಂದು ತಿಳಿಸಿದೆ.

ಒಕ್ಕೂಟಗಳ ಬಲಾಬಲ: ಕೋಲಾರ ಒಕ್ಕೂಟ ವ್ಯಾಪ್ತಿಯಲ್ಲಿ ಬಂಗಾರಪೇಟೆ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ, ಕೋಲಾರ ಸೇರಿ 5 ತಾಲೂಕುಗಳಿವೆ. 913 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 5,13,905 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಚಿಕ್ಕಬಳ್ಳಾಪುರ ಒಕ್ಕೂಟ ವ್ಯಾಪ್ತಿಯಲ್ಲಿ ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ಸೇರಿ 6 ತಾಲೂಕುಗಳಿದ್ದು 977 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 4.28 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಎರಡು ಜಿಲ್ಲೆಗಳಿಂದ ಶೇಖರಣೆಯಾಗುವ 9,56,000 ಲೀಟರ್ ಹಾಲಿನ ಪೈಕಿ 3,50,000 ಲೀಟರ್ ಹಾಲು 60 ಸಾವಿರ ಮೊಸರು, 4,00,000 ಯುಎಚ್‌ಟಿ ಹಾಲು, 50 ಸಾವಿರ ಲೀಟರ್ ಹಾಲಿನಲ್ಲಿ ಕೆನೆಭರಿತ ಹಾಲಿನ ಪುಡಿ ಮಾಡಿ ಮಾರಲಾಗುತ್ತದೆ. ಉಳಿದಂತೆ 96 ಸಾವಿರ ಲೀಟರ್ ಹಾಲನ್ನು ಕೆನೆ ಹಾಲಿನ ಪುಡಿ ರೂಪದಲ್ಲಿ ಮಾರಲಾಗುತ್ತದೆ (2021 ಜುಲೈ 21 ರ ಲೆಕ್ಕಾಚಾರ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net