

ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಚುರುಕುಗೊಂಡಿದ್ದು ಜವಾಬ್ದಾರಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಜೋರಾಗಿದೆ.
ನ.21 ರಂದು ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಪ್ರೊ.ಕೋಡಿರಂಗಪ್ಪ ಆಯ್ಕೆಯಾಗಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನು ನೇಮಿಸುವ ಹೊಣೆ ಅವರದ್ದಾಗಿದೆ. ಜಿಲ್ಲೆಯಲ್ಲಿ ನಾಡು-ನುಡಿ, ನೆಲ ಜಲ, ಸಾಹಿತ್ಯಾತ್ಮಕ ಚಟುವಟಿಕೆ ಮತ್ತಷ್ಟು ಚುರುಕುಗೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿ ತಾಲೂಕು ಸಮಿತಿಗಳು ಮತ್ತು ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿಗಳನ್ನು ರಚಿಸಬೇಕಾಗಿದೆ.
ಅಧ್ಯಕ್ಷ ಚುನಾವಣೆಯಲ್ಲಿ ದುಡಿದ ಅನೇಕರು ಈಗಾಗಲೇ ಪದಾಧಿಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದು ಹಿರಿಯ ಸಾಹಿತಿಗಳು, ನಿಕಟಪೂರ್ವ ಪ್ರಭಾವಿ ಪದಾಧಿಕಾರಿಗಳ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಪೈಪೋಟಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಆಕಾಂಕ್ಷಿಗಳ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸವಾಲು ಅಧ್ಯಕ್ಷರಿಗೆ ಎದುರಾಗಿದೆ.
ಕೋಡಿರಂಗಪ್ಪ ನೇತೃತ್ವದಲ್ಲಿ ಸಮಾನ ಮನಸ್ಕರ ವೇದಿಕೆಯಡಿ ಚರ್ಚಿಸಲಾಗುತ್ತಿದ್ದು, ಆಕಾಂಕ್ಷಿಗಳ ಆಶಯ ತಿಳಿದುಕೊಂಡು ಸೂಕ್ತ ಕ್ರಿಯಾಶೀಲ ವ್ಯಕ್ತಿಗಳ ತಲಾಶ್ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮೊದಲು ತಾಲೂಕು ಅಧ್ಯಕ್ಷರ ಆಯ್ಕೆ ಬಳಿಕ ಜಿಲ್ಲಾಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲು ಚಿಂತಿಸಲಾಗಿದ್ದು, ಚಿಂತಾಮಣಿಯಲ್ಲಿ ಸಮಿತಿ ರಚನೆ ವಿಚಾರವಾಗಿ ಸಭೆ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಟ್ಟುಹಿಡಿದ ಆಕಾಂಕ್ಷಿಗಳು: ನಾನಾ ಲೆಕ್ಕಾಚಾರದಲ್ಲಿ ನಿರ್ದಿಷ್ಟ ಪದಾಧಿಕಾರಿ ಹುದ್ದೆ ಬಯಸಿರುವ ಆಕಾಂಕ್ಷಿಗಳಿಗೆ ಸ್ಥಾನ ನೀಡಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ಜವಾಬ್ದಾರಿ ವಹಿಸುವ ಭರವಸೆ ನೀಡಲಾಗುತ್ತಿದೆ. ಆದರೆ, ಹಲವರು ಪಟ್ಟು ಬಿಡುತ್ತಿಲ್ಲ. ಆಯ್ಕೆ ಪ್ರಕ್ರಿಯೆ ಹಾಗೂ ಬೆಳವಣಿಗೆಗಳು ಅರಿವಿಗೆ ಬಂದರೂ ಸಭೆಗಳಲ್ಲಿ ಸುಮ್ಮನೆ ಕೂತು, ಬಳಿಕ ಅರ್ಹತೆ ಆಧಾರದ ಮೇಲೆ ಆಪ್ತ ವಲಯದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪದಾಧಿಕಾರಿಗಳ ಆಯ್ಕೆಯ ಅಧಿಕೃತ ಘೋಷಣೆಯ ಹಂತದವರೆಗೂ ಆಪ್ತ ವಲಯದಿಂದ ಅಧ್ಯಕ್ಷರ ಮೇಲೆ ಒತ್ತಡ ಹಾಕಿಸುವಲ್ಲಿ ನಿರತರಾಗಿದ್ದಾರೆ.
ನಿಬಂಧನೆ ಹೊರಡಿಸಿದ ಕಸಾಪ: ನಿಕಟಪೂರ್ವ ಸಮಿತಿಗಳ ರಚನೆ ಸಂದರ್ಭದಲ್ಲಿ ಕಂಡು ಬಂದ ಪದಾಧಿಕಾರಿಗಳ ತರಾತುರಿ ಆಯ್ಕೆ, ಪದತ್ಯಾಗದ ಬೆಳವಣಿಗೆಗಳು ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಸಾಪ ನೂತನ ಕೇಂದ್ರ ಸಮಿತಿ, ಕಾರ್ಯಕಾರಿ ಸಮಿತಿ ಡಿ.4 ರಂದು ಸಭೆ ಕೈಗೊಂಡು ಚರ್ಚಿಸಿದ ಬಳಿಕ ಹಲವು ನಿಬಂಧನೆಗಳನ್ನು ಪ್ರಕಟಿಸಿದೆ. ಜತೆಗೆ ನಿಯಮ ಅನುಸರಿಸದೇ ನೇಮಕ ಮಾಡಿ, ಅನುಮೋದನೆಗೆ ಕಳುಹಿಸಿದಲ್ಲಿ ಮಾನ್ಯತೆ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಸೂಚನೆಗಳೇನು?: ಜಿಲ್ಲಾ, ತಾಲೂಕು, ಗಡಿನಾಡು ಘಟಕಗಳ ಕಾರ್ಯಕಾರಿ ಸಮಿತಿಗೆ ನೇಮಕವಾಗುವವರು ಕಡ್ಡಾಯವಾಗಿ ಪರಿಷತ್ ಸದಸ್ಯರಾಗಿರಬೇಕು. ಹಿಂದೆ ಪದಾಧಿಕಾರಿ ಕರ್ತವ್ಯ ನಿರ್ವಹಿಸಿರುವವರನ್ನು ಮರು ನೇಮಿಸದೆ ಹೊಸಬರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಸೇರಿ ನಾಡು-ನುಡಿಯ ಸೇವೆಯಲ್ಲಿ ಶ್ರಮಿಸಿರುವುದನ್ನು ಪ್ರಮುಖವಾಗಿ ಪರಿಗಣಿಸಬೇಕು. ಯಾವುದೇ ರೀತಿಯಲ್ಲೂ ಅಪರಾಧ ಹಿನ್ನೆಲೆಯ, ಮೊಕದ್ದಮೆ ದಾಖಲಾಗಿರುವವರಿಗೆ ಅವಕಾಶ ಇಲ್ಲ. ಅನುಮೋದನೆಗೆ ಶಿಾರಸು ಕಳುಹಿಸುವ ಸಂದರ್ಭದಲ್ಲಿ ಸಂಪೂರ್ಣ ಸ್ವ ವಿವರವನ್ನು ಭಾವಚಿತ್ರ ಸಮೇತ ನೀಡಬೇಕು ಎಂದು ಕಸಾಪ ಕೇಂದ್ರ ಸಮಿತಿ ಜಿಲ್ಲಾಧ್ಯಕ್ಷರಿಗೆ ಸೂಚಿಸಿದೆ.
ಕಸಾಪ ಪದಾಧಿಕಾರಿಗಳ ಹುದ್ದೆಗೆ ನೇಮಕ ಬಯಸಿ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಸಹಜವಾಗಿ ಪೈಪೋಟಿ ಹೆಚ್ಚಾಗಿದೆ. ಇದರ ನಡುವೆ ಸಾಧಕ ಬಾಧಕಗಳನ್ನು ಚರ್ಚಿಸಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಪ್ರೊ ಕೋಡಿರಂಗಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ