ಚಿಕ್ಕಬಳ್ಳಾಪುರ ಕರೊನಾಮುಕ್ತ:ನಾಲ್ಕನೇ ಅಲೆ ತಡೆಗೆ ಮುಂಜಾಗ್ರತೆ ಪಾಲಿಸಿ

17CBP4
Published on

ಎನ್.ವೆಂಕಟೇಶ್,

ಚಿಕ್ಕಬಳ್ಳಾಪುರ: ನಾಲ್ಕನೇ ಅಲೆಯ ಆತಂಕದ ನಡುವೆ ಲಸಿಕಾಕರಣ ಮತ್ತು ಗುಣಮಟ್ಟದ ಚಿಕಿತ್ಸೆ ಸೇರಿ ನಾನಾ ಬಿಗಿ ಕ್ರಮಗಳಿಂದ ಚಿಕ್ಕಬಳ್ಳಾಪುರವು ಕಳೆದ ಕೆಲ ದಿನಗಳಿಂದಲೂ ಶೂನ್ಯ ಪ್ರಕರಣಗಳೊಂದಿಗೆ ಕರೊನಾ ಮುಕ್ತ ಜಿಲ್ಲೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು, ಸರಾಸರಿ ದಿನದ ಪತ್ತೆಯ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯ. ಗ್ರಾಮೀಣ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ಹಲವು ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗುತ್ತಿಲ್ಲ. ಈಗಾಗಲೇ ಕರೊನಾ ಕೇರ್ ಸೆಂಟರ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿ ಚಿಕಿತ್ಸಾ ಕೇಂದ್ರಗಳಲ್ಲಿ ಬಹುತೇಕ ಇತರ ಕಾಯಿಲೆಗಳತ್ತ ಗಮನಹರಿಸಲಾಗುತ್ತಿದೆ.

ಕಳೆದ 2020ನೇ ಸಾಲಿನ ಮಾರ್ಚ್‌ನಲ್ಲಿ ಗೌರಿಬಿದನೂರಿನಲ್ಲಿ ಮೊದಲ ಪ್ರಕರಣ ಪತ್ತೆಯಾಗುವ ಮೂಲಕ ಕರೊನಾ ಹಾವಳಿ ಪ್ರಾರಂಭವಾಗಿತ್ತು. ಬಳಿಕ ಕ್ರಮವಾಗಿ ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಸೇರಿ ಇತರ ಭಾಗದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಯಿತು. ಮಹಾರಾಷ್ಟ್ರದ ಕಾರ್ಮಿಕರು ಸೇರಿ ವಿವಿಧ ಭಾಗಗಳಿಂದ ಜನರ ವಲಸೆಯಿಂದ ಮಹಾಸ್ಫೋಟವೇ ಕಂಡು ಬಂತು. ಎರಡನೇ ಅಲೆ ಬಾಧಿಸಿತು. ಇನ್ನು ಮೂರನೇ ಅಲೆ ಅಷ್ಟಾಗಿ ಬಾಧಿಸಲಿಲ್ಲ. ಇದರ ನಡುವೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಬಿಗಿ ಕ್ರಮಗಳಿಂದ ಜಿಲ್ಲೆಯು ಇದೀಗ ಕರೊನಾಮುಕ್ತ ಪ್ರದೇಶವಾಗಿದೆ.

ಸೋಂಕಿನ ಅಂಕಿ ಅಂಶ: ಪ್ರಸ್ತುತ ಇಲ್ಲಿಯವರೆಗೂ 55,632 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 55,171 ಮಂದಿ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 461 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಮುಕ್ತ ಮೊದಲು ತಾಲೂಕು ಎಂಬ ಗರಿಮೆಗೆ ಗುಡಿಬಂಡೆ ಪಾತ್ರವಾಯಿತು.

ನಿರ್ಲಕ್ಷೃ ಸಲ್ಲ, ಕಾಳಜಿ ಅಗತ್ಯ: ಕರೊನಾಮುಕ್ತ ಚಿಕ್ಕಬಳ್ಳಾಪುರ ರಚನೆಯಾಗಿರುವುದರ ನಡುವೆ ನಾಲ್ಕನೇ ಅಲೆ ಆತಂಕ ಕಾಡುತ್ತಿದೆ. ಈಗ ನಿಯಂತ್ರಣದಲ್ಲಿದ್ದರೂ ಮುಂಬರುವ ದಿನಗಳಲ್ಲಿ ಮತ್ತೆ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸೋಂಕು ತಡೆಗೆ ಮುಂಜಾಗ್ರತೆ ಪಾಲಿಸಬೇಕಾಗಿದೆ. ಸೋಂಕಿನ ಲಕ್ಷಣಗಳನ್ನು ಕಂಡು ಬಂದ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆದು, ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ.

ಈಗಾಗಲೇ ಸಾಮಾಜಿಕ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವಿಕೆ ಸೇರಿ ಹಲವು ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಜನಸಂದಣಿ ವಿಚಾರದಲ್ಲಿ ಎಂದಿನಂತೆ ಸಾಮಾನ್ಯ ವಾತಾವರಣ ನಿರ್ಮಾಣವಾಗಿದೆ.

ಲಸಿಕಾಕರಣದಲ್ಲಿ ಉತ್ತಮ ಸಾಧನೆ: ಜಿಲ್ಲೆಯಲ್ಲಿ ಕರೊನಾ ಲಸಿಕಾಕರಣ ಅಭಿಯಾನವು ಬಿರುಸಿನಿಂದ ನಡೆಯುತ್ತಿದೆ. ಇಲ್ಲಿಯವರೆಗೂ 2,08,000,83 ಮಂದಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

ಕರೊನಾ ಪರಿಹಾರ: ಕರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ನಿಯಮಾನುಸಾರ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಅರ್ಹ ಫಲಾನುಭವಿಗಳು ಮೇ 18 ರೊಳಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅರ್ಹ ಫಲಾನುಭವಿಗಳ ವಾರಸುದಾರರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ತಿಳಿಸಿದ್ದಾರೆ.

ಕರೊನಾ ಸೋಂಕಿನ ಆತಂಕ ಬೇಡ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ನರಸಿಂಹಮೂರ್ತಿ, ವೈದ್ಯ ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net