

ಜಗಳೂರು: ತಾಲೂಕಿನ ಚಿಕ್ಕಬನ್ನಿಹಟ್ಟಿ ದಲಿತ ಕಾಲನಿಗೆ ಬುಧವಾರ ಹೊಸಕೆರೆ ಗ್ರಾಪಂ ಪಿಡಿಒ ಸತೀಶ್ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಕೂಲಿಗಾಗಿ ಗ್ರಾಪಂಗೆ ಮುತ್ತಿಗೆ ಶೀರ್ಷಿಕೆಯಡಿ ಮಂಗಳವಾರ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಬುಧವಾರ ಬೆಳಗ್ಗೆ ಗ್ರಾಮಕ್ಕೆ ದೌಡಾಯಿಸಿ ಪ್ರತಿ ಮನೆಯಲ್ಲೂ ಜಾಬ್‌ಕಾರ್ಡ್‌ಗಳನ್ನು ಪರಿಶೀಲಿಸಿದರು. ಕೂಲಿಕಾರರು ನಮೂನೆ 6 ರಲ್ಲಿ ಅರ್ಜಿ ಸಲ್ಲಿಸಿದರೆ ನಾಳೆಯಿಂದಲೇ ಕೆಲಸ ನೀಡಲಾಗುವುದು ಎಂದು ಮನವರಿಕೆ ಮಾಡಿಕೊಟ್ಟರು.
ಪಿಡಿಒ ಸತೀಶ್ ಮಾತನಾಡಿ, ಗ್ರಾಮದ ಚರಂಡಿಗಳಲ್ಲಿ ತುಂಬಿರುವ ಹೂಳೆತ್ತಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ತುಂಡು ಗುತ್ತಿಗೆಗೆ ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನಮೋದನೆಯಾದ ಕೂಡಲೇ ಕಾಮಗಾರಿ ನಿರ್ವಹಿಸಲಾಗುವುದು ಎಂದು ತಿಳಿಸಿದರು. ಗ್ರಾಮಸ್ಥರಾದ ನಿಂಗಪ್ಪ, ಚಂದ್ರಪ್ಪ, ಮಂಜಣ್ಣ, ಲಲಿತಮ್ಮ, ಹವಳಮ್ಮ ಇತರರಿದ್ದರು.