

ಗದಗ: ಮದುವೆ ಸಂಬಂಧದ ಮನಸ್ತಾಪದಿಂದ ಮಗನೊಬ್ಬ ಚಿಕ್ಕಪ್ಪನನ್ನೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬೆಟಗೇರಿಯಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ.
ಮಂಜುನಾಥ ಮಲ್ಲೇಶಪ್ಪ ಗದಗಿನ (42) ಕೊಲೆಯಾದವರು. ಪ್ರವೀಣ ಚಂದ್ರಶೇಖರ ಗದಗಿನ (25) ಹತ್ಯೆ ಮಾಡಿದ ಆರೋಪಿ. ಆರೋಪಿ ಪ್ರವೀಣ ತಮ್ಮ ಸಂಬಂಧಿಯೊಬ್ಬರ ಮಗಳನ್ನು ನೋಡಿ ಬಂದಿದ್ದ. ಆಕೆಯನ್ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಆದರೆ, ಹುಡುಗಿಯ ಮನೆಯವರು ಈ ಮದುವೆಗೆ ನಿರಾಕರಿಸಿದ್ದರು. ಸಂಬಂಧ ಕೈ ತಪ್ಪಲು ಚಿಕ್ಕಪ್ಪ ಮಂಜುನಾಥನೇ ಕಾರಣ ಎಂದು ಶಂಕಿಸಿದ ಪ್ರವೀಣ, ಮಂಗಳವಾರ ತಡರಾತ್ರಿ ಬೆಟಗೇರಿಯ ಟೆಂಗಿನಕಾಯಿ ಬಜಾರ್ನಲ್ಲಿ ಚಿಕ್ಪಪ್ಪನೊಂದಿಗೆ ಕೆಲಕಾಲ ಮಾತನಾಡಿದಂತೆ ನಟಿಸಿ, ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಪೊಲೀಸರು ಆರೋಪಿ ಪ್ರವೀಣನನ್ನು ವಶಕ್ಕೆ ಪಡೆದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜುನಾಥ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ, ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮಂಜುನಾಥ ಅವರ ಪತ್ನಿ ಪ್ರೇಮಾ ಗದಗಿನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಪ್ರವೀಣ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದನು. ಮದುವೆ ಮಾಡಿಕೊಳ್ಳುವ ವಿಷಯದಲ್ಲಿ ಉಂಟಾಗಿದ್ದ ಮನಸ್ತಾಪ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ತಿಳಿಸಿದ್ದಾರೆ.