

ಮೈಸೂರು: ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ ಕೋಪಗೊಂಡು, ಚಿಕ್ಕಪ್ಪನ ಮಗನನ್ನೇ ಹತ್ಯೆ ಮಾಡಿದ ರಾಜಸ್ಥಾನದ ನಾಗ್ಪುರ ಜಿಲ್ಲೆಯ ಅಂಗ್ರೇಜ್ ರಾಮ್‌ಗೆ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಂಗ್ರೇಜ್ ನಂಜನಗೂಡಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಆವಿಷ್ಕಾರ್ ಸ್ಟೋನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ತನ್ನ ಚಿಕ್ಕಪ್ಪನ ಮಕ್ಕಳಾದ ಸುರೇಶ್ ಹಾಗೂ ಮುಖೇಶನ್ನು ಕೆಲಸಕ್ಕಾಗಿ ಕರೆತಂದು, ಅವರು ಒಂದೇ ಕೊಠಡಿಯಲ್ಲಿ ನೆಲೆಸಿದ್ದರು.
2022ರ ಅಕ್ಟೋಬರ್ 24ರಂದು ರಾತ್ರಿ ಅಂಗ್ರೇಜ್ ಹಾಗೂ ಸುರೇಶ್ ಕೊಠಡಿ ಹೊರಗೆ ನಿಂತು ಮಾತನಾಡುತ್ತಿದ್ದಾಗ, ತಾಯಿಯ ಬಗ್ಗೆ ಸುರೇಶ್ ಕೆಟ್ಟದಾಗಿ ಮಾತನಾಡಿದ್ದಾನೆ. ಇದರಿಂದ ಆರೋಪಿಯು ಪಕ್ಕದಲ್ಲಿದ್ದ ದೊಣ್ಣೆಯಿಂದ ತಲೆಗೆ ಬಾರಿಸಿದ್ದು, ಬಲವಾದ ಗಾಯವಾಗಿ ಆತ ಮೃತಪಟ್ಟಿದ್ದ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಇನ್‌ಸ್ಪೆಕ್ಟರ್ ಶಿವನಂಜಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶೆ ಕೆ.ಭಾಗ್ಯಾ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆಯೊಂದಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಟಿ.ಎಚ್.ಲೋಲಾಕ್ಷಿ ವಾದ ಮಂಡಿಸಿದರು.