

ರೋಣ: ಮಿತಿ ಮೀರದ ಜನಸಂಖ್ಯೆಯಿಂದಾಗಿ ಆಹಾರ, ನೀರು ಸೇರಿದಂತೆ ಖನಿಜ ಸಂಪತ್ತಿನ ಕೊರತೆ ಉಂಟಾಗುತ್ತದೆ. ಸಸ್ಯ ಸಂಪತ್ತಿನ ನಾಶ, ಅರಣ್ಯ ಒತ್ತುವರಿ ನೈಸರ್ಗಿಕ ಅಸಮತೋಲನದಿಂದಾಗಿ ಬರ ಅತಿವೃಷ್ಟಿ ಆನಾವೃಷ್ಟಿಯಂತಹ ಸಮಸ್ಯೆಗಳಿಂದ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ. ಮಾನೇದ ಹೇಳಿದರು.
ಪಟ್ಟಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ಗದಗ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮತ್ತು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ರೋಣ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಚಿಕ್ಕ ಸಂಸಾರ ನೆಮ್ಮದಿ ಅಪಾರ ಎನ್ನುವಂತೆ ಚಿಕ್ಕ ಕುಟುಂಬವನ್ನು ಹೊಂದುವ ಮೂಲಕ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, 1987ರಲ್ಲಿ ವಿಶ್ವ ದ ಜನಸಂಖ್ಯೆ 500 ಕೋಟಿ ತಲುಪಿದಾಗ ವಿಶ್ವ ಆರೋಗ್ಯ ಸಂಸ್ಥೆ ಎಚ್ಚತ್ತು ಕೊಂಡು ವಿಶ್ವದ ಹಲವಾರು ದೇಶಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು. ಜನಸಂಖ್ಯಾ ಸ್ಫೋಟದಿಂದಾಗುವ ಸಮಸ್ಯೆಗಳು ಮತ್ತು ಅನಾಹುತಗಳ ಬಗ್ಗೆ ಜನಸಮುದಾಯದಲ್ಲಿ ಜನ ಜಾಗೃತಿ ಮೂಡಿಸಿ ಜನಸಂಖ್ಯೆ ಸ್ಥಿರತೆ ಕಾಪಾಡುವುದು. ನೈಸರ್ಗಿಕ ಸಮತೋಲನ ಕಾಪಾಡುವುದರ ಜತೆಗೆ ಗುಣಮಟ್ಟದ ಜೀವನ ನಡೆಸಲು ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನ ಆಚರಿಸಲಾಗುತ್ತಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಿಂಗನಗೌಡ ಪಾಟೀಲ ಮಾತನಾಡಿದರು. ಉಪನ್ಯಾಸಕರಾದ ಎ.ಎಸ್. ತಹಶೀಲ್ದಾರ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಆರ್. ಪಾಟೀಲ, ರಹಿಮಾ ಅತ್ತಾರ, ರತ್ನಾ ಬನಪ್ಪನವರ ಇತರರಿದ್ದರು.